ತುಮಕೂರು

ತುಮಕೂರು ಜಿಲ್ಲೆ ತಿಪಟೂರು ತಾಲೂಕು ಗ್ಯಾರಘಟ್ಟ ಗ್ರಾಮದ ಪುರಾತನ ಮೆಟ್ಟಿಲು ಬಾವಿ(ಕಲ್ಯಾಣಿ)ಯನ್ನು ಸ್ವಚ್ಛತಾ ಹೀ ಸೇವಾ (ಎಸ್‍ಎಚ್‍ಎಸ್) ಆಂದೋಲನ ಕಾರ್ಯಕ್ರಮದಡಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಗತವೈಭವದ ಸ್ಪರ್ಶ ನೀಡಲಾಗಿದೆ.
ಸುಮಾರು 120 ವರ್ಷಗಳ ಹಳೆಯದಾದ ಈ ಮೆಟ್ಟಿಲು ಬಾವಿಯು ನೀರಿಲ್ಲದೆ ಕಸದ ರಾಶಿ ತುಂಬಿಕೊಂಡು ಮುಳ್ಳುಗಿಡ-ಗಂಟೆ ಬೆಳೆದು ಮುಚ್ಚಿ ಹೋಗಿತ್ತು. ನಿರ್ವಹಣೆಯಿಲ್ಲದೆ ನೀರಿನ ಸೆಲೆ ಬತ್ತಿಹೋಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾದ್ಯಂತ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಗ್ರಾಮಸ್ಥರ ಸಹಕಾರದಲ್ಲಿ ಗ್ಯಾರಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 45 ಮಂದಿ ಒಗ್ಗೂಡಿ ಒಂದೇ ದಿನದಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಮೂಲಕ ಹಾಳಾದ ಮೆಟ್ಟಿಲು ಬಾವಿಗೆ ಪುನರ್‍ಜೀವ ನೀಡಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಮಿಷನ್ ನಿರ್ದೇಶಕರಾದ ಗಂದಾಧರ ಸ್ವಾಮಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ವಿದ್ಯಾಕುಮಾರಿ ಅವರ ನಿರ್ದೇಶನದನ್ವಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿತ್ತು.
ಗ್ಯಾರಘಟ್ಟ ಗ್ರಾಮದಲ್ಲಿ 18ನೇ ಶತಮಾನದಷ್ಟು ಹಳೆಯದಾದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಹತ್ತಿರದಲ್ಲೇ ಇರುವುದರಿಂದ ಈ ಮೆಟ್ಟಿಲು ಬಾವಿ ಪ್ರಸಿದ್ಧವಾಗಿದೆ. ಗ್ಯಾರಘಟ್ಟ ಗ್ರಾಮದ ಸುತ್ತಮುತ್ತಲಿನ ನಾಲ್ಕೈದು ಗ್ರಾಮದವರು ವಿಶೇಷ ದಿನಗಳಂದು ಶ್ರೀ ಆಂಜನೇಯ ಸ್ವಾಮಿಯನ್ನು ಈ ಕಲ್ಯಾಣಿ ಬಳಿ ಕರೆತಂದು ಗಂಗಮ್ಮ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡಿ ಮೆರವಣಿಗೆ ಮಾಡುತ್ತಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಗ್ರಾಮದ ಪೂರ್ವಜರು ಕುಡಿಯುವ ನೀರಿಗೆ ಈ ಬಾವಿಯನ್ನೇ ಅವಲಂಬಿಸಿದ್ದರು. ಆದರೆ ಕಳೆದ ಕೆಲವು ದಶಕಗಳ ಹಿಂದೆ ನಿರ್ವಹಣೆ ಮಾಡದೆ ಕಲ್ಯಾಣಿಯನ್ನು ಕೈಬಿಡಲಾಯಿತು. ಕಸ ಮತ್ತು ಮುಳ್ಳು ಪೊದೆಗಳು ಬೆಳೆದು ಬಾವಿಯ ನೀರನ್ನು ಬಳಸದೆ ಪಾಳು ಬಿದ್ದಿತ್ತು. ಪಾಳು ಬಿದ್ದು, ಬಳಕೆಗೆ ಯೋಗ್ಯವಲ್ಲದ ಈ ಕಲ್ಯಾಣಿಗೆ ಹಿಂದಿನ ವೈಭವದ ಸ್ಪರ್ಶ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಂದ ಜಾಥಾ ನಡೆಸಿ ಸ್ವಚ್ಛಗೊಳಿಸುವ ಬಗ್ಗೆ ಅರಿವು ಮೂಡಿಸಲಾಯಿತು. ಇದರಿಂದ ಸ್ವಚ್ಛಗ್ರಾಹಿಗಳು ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಂಡು ಹಳೆಯ ಮೆಟ್ಟಿಲು ಬಾವಿಯ ಹೂಳು ತೆಗೆದು, ಸ್ವಚ್ಛಗೊಳಿಸಿ, ಮರುಜೀವ ನೀಡಿದ್ದರಿಂದ ಬಾವಿಯಲ್ಲಿ ನೀರು ಸೆಲೆ ಬರಲು ಪ್ರಾರಂಭವಾಗಿದೆ.
ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಹಮ್ಮಿಕೊಂಡ ಶ್ರಮದಾನದಿಂದ ಬತ್ತಿದ ಬಾವಿಯಲ್ಲಿ ನೀರಿನ ಸೆಲೆ ಬಂದಿರುವುದನ್ನು ಕಂಡ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಎಲ್ಲ ಗ್ರಾಮಗಳ ಪ್ರಮುಖ ಬೀದಿ, ಶಾಲೆ ಆವರಣ, ಆಟದ ಮೈದಾನ, ಕಲ್ಯಾಣಿ, ಧಾರ್ಮಿಕ ಕೇಂದ್ರಗಳು, ತ್ಯಾಜ್ಯ ಸಂಗ್ರಹವಾಗುವ ಪ್ರದೇಶ, ಜಲಮೂಲಗಳನ್ನು ಸ್ವಚ್ಛಗೊಳಿಸಿ ಸ್ವಚ್ಛಗ್ರಾಮಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗ್ಯಾರಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೇಜಸ್ವಿ ತಿಳಿಸಿದ್ದಾರೆ.

(Visited 12 times, 1 visits today)