ತುಮಕೂರು


ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ಬೃಹತ್ ಸಮಾವೇಶ ಕಲಬುರ್ಗಿಯಲ್ಲಿ ಇದೇ ಅಕ್ಟೋಬರ್ 30 ರಂದು ನಡೆಯಲಿದ್ದು ತುಮಕೂರು ಸಂಘಟನಾತ್ಮಕ ಜಿಲ್ಲೆಯಿಂದ 30 ಸಾವಿರ ಮಂದಿ ಭಾಗವಹಿಸುತ್ತಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಕಾರ್ಯಕರ್ತರಿಗೆ ಕರೆ ನೀಡಿದರು.
ಇಂದು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಸಂಬಂಧದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹಿಂದುಳಿದ ವರ್ಗಗಳ ಅಭಿವೃದ್ಧಿ-ಶ್ರೇಯಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಡಬ್ಬಲ್ ಇಂಜಿನ್ ಸರ್ಕಾರಗಳು ಬಾರೀ ಅನುಧಾನಗಳನ್ನು ಕಾರ್ಯಕ್ರಮಗಳ ಮೂಲಕ ನೀಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಪ್ರತಿ ಗ್ರಾಮಗಳಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು, ಮುಖಂಡರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಬಿಜೆಪಿಗೆ ಶಕ್ತಿ ತುಂಬಿವೆ. ಇದರಿಂದಲೇ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲು ಸಾಧ್ಯವಾಗಿದೆ. ಸರ್ಕಾರವೂ ಸಹ ಹಿಂದುಳಿದ ವರ್ಗದ ಸಮುದಾಯಕ್ಕೆ ಅನೇಕ ಯೋಜನೆಗಳ ಮೂಲಕ ಸೌಲಭ್ಯ ನೀಡುತ್ತಿದ್ದು ರಾಜ್ಯದಲ್ಲಿ ಐವರು ಹಿಂದುಳಿದ ವರ್ಗಕ್ಕೆ ಸೇರಿದ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಬಿಜೆಪಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿದೆ ಎಂದರು.
ಕಲ್ಬುರ್ಗಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ರಾಜ್ಯದ ಸುಮಾರು 7 ರಿಂದ 8 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಪ್ರದರ್ಶನ ನಡೆಯಲಿದ್ದು, ಮುಂಬರುವ ಚುನಾವಣೆಗೆ ಈ ಸಮಾವೇಶ ದಿಕ್ಸೂಚಿಯಾಗಲಿದೆ. ಪ್ರತಿಯೊಬ್ಬರೂ ಮನಸ್ತಾಪ, ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಕೇಂದ್ರ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕಿದೆ ಎಂದು ತಿಳಿಸಿದರು.
ಈ ಬೃಹತ್ ಜಾಗೃತಿ ಸಮಾವೇಶದಲ್ಲಿ 7-8 ಲಕ್ಷ ಜನ ಬರುವ ನಿರೀಕ್ಷೆಯಿದ್ದು ಪಕ್ಷ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿರವರ ಕೇಂದ್ರ ಸಚಿವ ಸಂಪುಟದಲ್ಲಿ 21 ಜನ ಹಿಂದುಳಿದ ವರ್ಗದ ಸಂಸದರನ್ನು ಸಚಿವರನ್ನಾಗಿ ಮಾಡುವ ಮೂಲಕ ಹಿಂದುಳಿದ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಮುಖ 105 ಹಿಂದುಳಿದ ವರ್ಗಗಳಲ್ಲದೇ 500ಕ್ಕೂ ಅಧಿಕ ಉಪಜಾತಿಗಳಿವೆ. ಇವೆಲ್ಲವನ್ನು ಒಗ್ಗೂಡಿಸಿಕೊಂಡು ಅವರನ್ನು ಸರ್ವ ವಿಧದಲ್ಲಿಯೂ ಪ್ರಗತಿ ಹೊಂದಿದವರನ್ನಾಗಿ ಮಾಡುವುದಕ್ಕೆ ಬಿಜೆಪಿ ಸಂಕಲ್ಪ ಮಾಡಿದೆ. ಈ ಹಿನ್ನೆಲೆಯಲ್ಲಿ ಸಮಾವೇಶಗಳನ್ನು ಮಾಡುವ ಮೂಲಕ ಇವರನ್ನು ಒಗ್ಗೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಮಾಜಿ ಎಂಎಲ್‍ಸಿಗಳಾದ ಎಂ.ಡಿ.ಲಕ್ಷೀನಾರಾಯಣ ಮತ್ತು ಡಾ||ಎಂ.ಆರ್.ಹುಲಿನಾಯ್ಕರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಒಬಿಸಿ ಜಿಲ್ಲಾ ಪ್ರಭಾರಿ ಪ್ರೇಮಾನಾಗಯ್ಯ, ರಾಜ್ಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಆ.ನ.ಲಿಂಗಪ್ಪ, ಓಬಿಸಿ ಮುಖಂಡ ಬೆಟ್ಟಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ವೈ.ರುದ್ರೇಶ್, ಜಿಲ್ಲಾ ಸಂಯೋಜಕ ಚಂದನ್ ಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ನಾಗೇಶ್ ವಿ.ಬಿ.ತೇಲ್ಕರ್ ಸೇರಿ ಓಬಿಸಿ ಜಿಲ್ಲೆಯ ವಿವಿಧ ಭಾಗದ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕಾರಿಣಿ ಮಂಡಳಿ ಸದಸ್ಯರು, ತಾಲೂಕು ಅಧ್ಯಕ್ಷರು, ಮಂಡಲ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.

(Visited 2 times, 1 visits today)