ತುಮಕೂರು


ಅಹಿಂಸಾ ತತ್ವದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಂತಹ ಮಹಾನ್ ಚೇತನ, ಮಹಾತ್ಮಗಾಂಧೀಜಿಯವರು ನಡೆದಂತಹ ದಾರಿ, ನೀಡಿದ ಮಾರ್ಗದರ್ಶನ ನಮ್ಮೆಲ್ಲರಿಗೂ ಆದರ್ಶವಾಗಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಮಾಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಮಾತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದ ಅವರು, ಗಾಂಧೀಜಿ ಹೇಳುವಂತೆ ಅಹಿಂಸೆ ಹೇಡಿತನವಲ್ಲ. ಅವರು ಪ್ರತಿಪಾದಿಸಿದ ಅಹಿಂಸಾ ತತ್ವವನ್ನು ನಾವುಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ ಎಂದರು.
ಗಾಂಧೀಜಿಯವರ ಕೇವಲ ಒಂದೆರಡು ಬರಹಗಳನ್ನು ಓದಿ ಅವರನ್ನು ಅರ್ಥೈಸಲಾಗದು. ಮಹಾತ್ಮಗಾಂಧೀಜಿ ಕೇವಲ ಭಾರತಕ್ಕೆ ಸೀಮಿತವಲ್ಲ, ಅವರು ವಿಶ್ವದ ನಾಯಕ. ಅಮೇರಿಕಾದಲ್ಲಿ ವರ್ಣಭೇಧ ನೀತಿಯ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರು, ಗಾಂಧೀಜಿ ಕುರಿತು ‘ಕ್ರೈಸ್ತ ನಮಗೆ ಬದುಕು ಕೊಟ್ಟರೆ, ಗಾಂಧೀಜಿಯವರು ಹೇಗೆ ಬದುಕಬೇಕು’ ಎಂದು ನುಡಿದಿದ್ದರು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಾಂಧೀಜಿಯವರು ಸತ್ಯ, ಅಹಿಂಸೆಯ ದಾರಿಯಲ್ಲಿ ನಡೆದಂತೆ ಒಳ್ಳೆಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡಬೇಕು. ಮಹಾನ್ ವ್ಯಕ್ತಿಗಳ ಕುರಿತು ಕಿರು ಪುಸ್ತಕಗಳನ್ನು ಮಕ್ಕಳ ಜ್ಞಾನಾರ್ಜನೆಗೆ ಒದಗಿಸಬೇಕು, ಆಗ ಮಾತ್ರ ಅವರಲ್ಲಿ ರಾಷ್ಟ್ರಾಭಿಮಾನ ಮೂಡಿಸಲು ಸಾಧ್ಯ ಮತ್ತು ದೇಶಕ್ಕೆ ಉತ್ತಮ ಪ್ರಜೆ ದೊರಕಲು ಸಾಧ್ಯ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ವೇದ, ಉಪನಿಷತ್ತು, ಅರಣ್ಯಕ, ಬ್ರಾಹ್ಮಣಕ ಕುರಿತು ಅತ್ಯಂತ ಅಪಾರವಾದ ಜ್ಞಾನವಿದೆ. ಜ್ಞಾನಕ್ಕೆ ಕೊರತೆ ಇಲ್ಲ. ವೇದಗಳ ಕಾಲದಿಂದ ಶುರುವಾಗಿ ಕಗ್ಗಗಳ ಕಾಲದವರೆಗೂ ಜಗತ್ತಿನಲ್ಲಿರುವ ಎಲ್ಲಾ ತತ್ವಸಾರಗಳನ್ನು, ಜ್ಞಾನವನ್ನು ಎಲ್ಲರೂ ಹೇಳಿದ್ದಾರೆ. ಆದರೆ ಆಚರಣೆ ಮಾಡುವ ವ್ಯಕ್ತಿಗಳು ವಿರಳಾತಿವಿರಳ. ಮಹಾತ್ಮಗಾಂಧಿಜಿಯವರು. ಇಂತಹ ಕಾಲಘಟ್ಟದಲ್ಲಿ ತಮ್ಮ ಜ್ಞಾನಕ್ಕೆ ತಕ್ಕಂತೆ ಬದುಕಿ, ನುಡಿದಂತೆ ಬದುಕಿ, ನ್ಯಾಯ, ಅಹಿಂಸೆ, ಶಾಂತಿ, ಇತ್ಯಾದಿ ವಿಚಾರಗಳನ್ನು ಜಗತ್ತಿಗೆ ಸಾರಿದರು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಯಾವುದೇ ಧರ್ಮವನ್ನು ನಾವು ವಿಶ್ಲೇಷಣೆ ಮಾಡಿದಾಗ ಅಹಿಂಸೋ ಧರ್ಮೋಧರ್ಮ ಎಂಬುದು ತಿಳಿದು ಬರುತ್ತದೆ. ಮಾನವೀಯತೆ ಎಲ್ಲ ಧರ್ಮಗಳ ಮೂಲ ಆಶಯವಾಗಿದೆ. ಮಾನವೀಯತೆಯನ್ನು ಬುದ್ಧ, ಬಸವಣ್ಣನವರು ಎತ್ತಿ ಹಿಡಿದಿರುತ್ತಾರೆ. ಮನುಷ್ಯನಿಗಿರುವ ವಿಶಿಷ್ಟವಾದ ಗುಣವೇ ಮನುಷ್ಯತ್ವ. ಶಾಂತಿ, ಸಹನೆ, ತಾಳ್ಮೆ, ಇತ್ಯಾದಿಗಳನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯವನ್ನು ದೇಶದಿಂದ ಹೊರದೂಡಿ, ಭಾರತ ಮಾತೆಯ ಮಕ್ಕಳಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಂತಹ ಮೇರು ವ್ಯಕ್ತಿತ್ವ, ಪುಣ್ಯ ಪುರುಷ ಗಾಂಧಿಜಿಯವರು. ಗಾಂಧೀಜಿಯವರ ಹೋರಾಟ, ತ್ಯಾಗಗಳಿಂದಾಗಿ ನಾವಿಂದು ಸ್ವಾತಂತ್ರವಾಗಿ ನಮ್ಮ ಜೀವನವನ್ನು ನಡೆಸುತ್ತಿದ್ದೇವೆ ಎಂದರು.
ಮಹಾತ್ಮಗಾಂಧಿಜಿಯವರ ಅಸ್ಮಿತತೆ ಇಂದು ಜಗತ್ತಿನಾದ್ಯಂತ ಪ್ರಸರಿಸುತ್ತಿದೆ. ಅವರಿಂದಾಗಿ ಜಗತ್ತಿನಾದ್ಯಂತ ಭಾರತೀಯರಿಗೆ ಗೌರವ ಸಲ್ಲುತ್ತಿದೆ. ಮನುಷ್ಯ ಯಾವ ರೀತಿ ಬದುಕಬೇಕು ಎಂಬುದರ ಕುರಿತು ಮಾಹಾತ್ಮ ಗಾಂಧೀಜಿಯವರು ಭಾಷಣ ಮಾಡಿಲ್ಲ, ಬದಲಾಗಿ ಬದುಕಿ ತೋರಿಸಿಕೊಟ್ಟಿದ್ದಾರೆ. ಕೃಷಿ, ಸಾವಯುವ ಕೃಷಿ, ಗ್ರಾಮಸ್ವರಾಜ್ಯ, ಶಿಕ್ಷಣ, ರಾಜಕೀಯ ನೀತಿ, ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಗಾಂಧೀಜಿಯವರು ತಮ್ಮದೇ ಆದ ವಿಚಾರಧಾರೆಗಳನ್ನು ಪ್ರತಿಪಾದಿಸಿದ್ದಾರೆ. ಮಹಾತ್ಮಗಾಂಧಿ ಜಯಂತಿ ಎಂದರೆ, ರಜೆಯ ದಿನ ಎನ್ನುವುದು ತಪ್ಪು ಕಲ್ಪನೆ. ಇದು ಅತ್ಯಂತ ಪುಣ್ಯವಾದ ದಿನ. ಜಗತ್ತಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿಯನ್ನು ನೆನೆಯುವ ದಿನ. ಇದೇ ನಾವು ಮಾಹಾತ್ಮಗಾಂಧೀಜಿಯವರಿಗೆ ನೀಡುವ ಗೌರವ ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು.
ಮಹಾತ್ಮಗಾಂಧಿಜಿ ಜಯಂತಿ ಅಂಗವಾಗಿ ಲಲಿತಾಚಲಂ ಅವರಿಂದ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು.
ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮಾ, ಡಿಡಿಪಿಐ ನಂಜಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(Visited 1 times, 1 visits today)