ತುಮಕೂರು :

      ಜಿಲ್ಲೆಯಲ್ಲಿ ಈಗಾಗಲೇ ಇರುವ 7 ಖರೀದಿ ಕೇಂದ್ರಗಳಲ್ಲಿ ಕನಿಷ್ಟ ಬೆಂಬಲ ಬೆಲೆ (ಎಂಎಸ್‍ಪಿ) ಯೋಜನೆಯಡಿ ರಾಗಿಯನ್ನು ಖರೀದಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ನಡೆದ 2019-20ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿರುವ ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು, ತುಮಕೂರು, ತುರುವೇಕೆರೆ, ಹುಳಿಯಾರ್ ಖರೀದಿ ಕೇಂದ್ರಗಳಲ್ಲಿ ಈ ಬಾರಿಯೂ ಖರೀದಿ ಪ್ರಕ್ರಿಯೆಯನ್ನು ಮುಂದುವರೆಸುವುದು ಸೂಕ್ತ ಎಂದು ಅವರು ತಿಳಿಸಿದರು.

      2019-20ನೇ ಸಾಲಿನ ಎಂಎಸ್‍ಪಿ ಯೋಜನೆಯಡಿ ರಾಗಿ ಖರೀದಿ ಬೆಲೆಯು ಕ್ವಿಂಟಾಲ್‍ಗೆ 3150 ರೂ.ಗಳಾಗಿದ್ದು, ಜನವರಿ ಎರಡನೇ ವಾರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಖರೀದಿ ಕೇಂದ್ರಗಳಲ್ಲಿ ಎಫ್‍ಎಕ್ಯೂ ಗುಣಮಟ್ಟದ ರಾಗಿಯನ್ನೇ ಖರೀದಿ ಮಾಡಬೇಕು. ಖರೀದಿಯಲ್ಲಿ ಲೋಪವಾದರೆ ಸಂಬಂಧಪಟ್ಟವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಖರೀದಿ ಕೇಂದ್ರಗಳಲ್ಲಿರುವ ಸಿಬ್ಬಂದಿಗಳು ಹಾಗೂ ಗ್ರೇಡರ್‍ಗಳಿಗೆ ಖರೀದಿ ಪ್ರಕ್ರಿಯೆ ಕುರಿತಂತೆ ಸೂಕ್ತ ಸಲಹೆ ಸೂಚನೆ ಹಾಗೂ ತರಬೇತಿಯನ್ನು ನೀಡಿ ಪಾರದರ್ಶಕವಾಗಿ ಕೆಲಸ ನಡೆಯುವಂತೆ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

      ಖರೀದಿ ಕೇಂದ್ರಗಳಲ್ಲಿ ಎಂಎಸ್‍ಪಿ ಹಾಗೂ ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ರೈತರಿಗೆ ಯಾವುದೇ ಗೊಂದಲಗಳಿಲ್ಲದಂತೆ ನೋಡಿಕೊಳ್ಳಲು ಕರಪತ್ರ ಹಂಚುವುದು, ಎಪಿಎಂಸಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‍ಗಳ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

       ಖರೀದಿ ಕೇಂದ್ರಗಳಲ್ಲಿ ಬಳಸುವ ತೂಕದ ಉಪಕರಣಗಳನ್ನು ಪ್ರಮಾಣೀಕರಿಸಬೇಕು ಮತ್ತು ಆಗಾಗ ಪರೀಕ್ಷಿಸಿ ವರದಿ ನೀಡಬೇಕು ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಖರೀದಿ ಕೇಂದ್ರಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಸುವ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಹಾಗೂ ಸಂಗ್ರಹಣಾಗಾರದಲ್ಲಿ ಆಯಾ ದಿನ ರೈತರಿಂದ ಖರೀದಿಸಿದ ರಾಗಿಗೆ ಅದೇ ದಿನ ಉಗ್ರಾಣ ರಶೀದಿಯನ್ನು ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಸಾಲಿನ ರಾಗಿ ಇಳುವರಿ ಹಾಗೂ ಈ ಸಾಲಿನಲ್ಲಿ ಬರಬಹುದಾದ ಇಳುವರಿಯ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರಲ್ಲದೇ, ಕಳೆದ ಸಾಲಿಗಿಂತ ಈ ಬಾರಿ ರಾಗಿ ಇಳುವರಿ ಶೇ.40-50ರಷ್ಟು ಅಧಿಕವಾಗಿರುವುದರಿಂದ ಖರೀದಿ ಕೇಂದ್ರಗಳಿಗೆ ಹೆಚ್ಚಿನ ರಾಗಿ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ನಿರ್ದೇಶಕ ಎಂ.ಸಿ. ಶ್ರೀನಿವಾಸಯ್ಯ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕರು, ರಾಜ್ಯ ಉಗ್ರಾಣ ನಿಗಮ ತುಮಕೂರು ಘಟಕ-1 ಮತ್ತು 2, ಹಾಗೂ ತಿಪಟೂರಿನ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

(Visited 36 times, 1 visits today)