ತುಮಕೂರು : 

      ಮುಂಬರುವ 2020ರ ಜನವರಿ 3ರಂದು ತುಮಕೂರು ನಗರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

      ಈ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

      ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತುಮಕೂರು ನಗರದಲ್ಲಿ ಜನವರಿ 3ರಂದು ಪ್ರಧಾನ ಮಂತ್ರಿಗಳ ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಇಂತಹ ಕಾರ್ಯಕ್ರಮವನ್ನು ಯಾವುದೇ ಲೋಪದೋಷವಿಲ್ಲದೆ ಯಶಸ್ವಿಯಾಗುವಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

      ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಿಷ್ಠಾಚಾರ ಸಮಿತಿ, ವೇದಿಕೆ ಸಮಿತಿ, ಮೂಲಭೂತ ಸೌಕರ್ಯ ಸಮಿತಿ ಹೀಗೆ ಹಲವು ಪ್ರಮುಖ ಸಮಿತಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ರಚಿಸಲಾಗಿದೆ. ಈ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

     ಕಾರ್ಯಕ್ರಮಕ್ಕೆ ಸಮಯಾವಕಾಶ ಕಡಿಮೆ ಇದೆ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು. ಕಾರ್ಯಕ್ರಮ ಮುಗಿಯುವವರೆಗೂ ಯಾರೂ ರಜೆಯ ಮೇಲೆ ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  ಸಮಾರಂಭ ನಡೆಯುವ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನು ಯೋಗ್ಯವಾಗಿ ಇಟ್ಟುಕೊಳ್ಳಬೇಕು. ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಡಿವೈಎಸ್‍ಪಿ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 30 times, 1 visits today)