ತುಮಕೂರು


ಕರ್ನಾಟಕ ರತ್ನ ಪವರ್‍ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಕೊನೆಯ ಸಿನಿಮಾ ಗಂಧದಗುಡಿ ಸಾಕ್ಷ್ಯಚಿತ್ರ ರೂಪದಲ್ಲಿ ತೆರೆಗೆ ಅಪ್ಪಳಿಸುತ್ತಿದ್ದಂತೆ ಮಾಜಿ ಸಚಿವರಾದ ಸೊಗಡು ಶಿವಣ್ಣ ಅವರ ಕುಟುಂಬ ನಗರದ ಎಸ್. ಮಾಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ನೇಹಿತ ವರ್ಗಕ್ಕೆ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಉಚಿತ ವ್ಯವಸ್ಥೆ ಮಾಡುವುದರ ಜತೆಗೆ ಸಾಕ್ಷ್ಯಚಿತ್ರ ವೀಕ್ಷಿಸಿದ ನಂತರ ಉಚಿತವಾಗಿ ಗಂಧದ ಸಸಿಗಳನ್ನು ವಿತರಣೆ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ.
ಚಿತ್ರ ವೀಕ್ಷಣೆಯ ನಂತರ ಸಸಿಗಳನ್ನು ವಿತರಿಸಿ ಮಾತನಾಡಿದ ಮಾಜಿ ಸಚಿವರಾದ ಸೊಗಡು ಶಿವಣ್ಣ ಅವರ ಪುತ್ರ ಕುಮಾರಸ್ವಾಮಿ, ನಟ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಸಂದಿದ್ದು, ಅವರ ಗಂಧದ ಗುಡಿ ಸಾಕ್ಷ್ಯಚಿತ್ರದ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದು ಅವರು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.


ಗಂಧದಗುಡಿ ಸಾಕ್ಷ್ಯಚಿತ್ರದ ಮೂಲಕ ನಾಡಿನ ನೆಲ, ಜಲ, ಅರಣ್ಯ ಸಂಪತ್ತು ಪ್ರವಾಸಿ ತಾಣಗಳನ್ನು ಕಣ್ಮುಂದೆ ತಂದು ನಿಲ್ಲಿಸಿರುವ ಪವರ್‍ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಮನದಲ್ಲಿ ಪರಿಸರ ಕಾಳಜಿ ಬಿತ್ತಿದ್ದಾರೆ. ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.
ಇದು ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಎಂದು ಬಿಂಬಿಸಲಾಗಿದ್ದು, ಈ ಸಾಕ್ಷ್ಯಚಿತ್ರವು ಕರ್ನಾಟಕದ ಕಾಡುಗಳು, ಸುಂದರವಾದ ಕಡಲತೀರಗಳು ಮತ್ತು ನೀರೊಳಗಿನ ಪ್ರಪಂಚವನ್ನು ಪರಿಶೋಧಿಸುತ್ತದೆ ಎಂದು ಹೇಳಿದರು.
ಪುನೀತ್ ರಾಜ್‍ಕುಮಾರ್ ಅವರು ಪರಿಸರ ಕಾಳಜಿಯನ್ನು ಹೊಂದಿದ್ದು, ಉತ್ತಮ ಪರಿಸರಕ್ಕಾಗಿ ಅವರಿಗಿದ್ದ ಕಾಳಜಿಯನ್ನು ಈ ಸಾಕ್ಷ್ಯಚಿತ್ರದ ಮೂಲಕ ತೋರಿಸಲಾಗಿದೆ. ಅವರ ತಂದೆಯವರ ಆಸೆಯನ್ನು ಕಾರ್ಯಗತ ಮಾಡಿದ್ದಾರೆ ಎಂದು ತಿಳಿಸಿದರು.
ನಾಗರತ್ನ ಎಸ್. ಶಿವಣ್ಣ ಮಾತನಾಡಿ, `ಗಂಧದ ಗುಡಿ’ಯಂತಹ ಚಿತ್ರವನ್ನು ಕನ್ನಡ ಚಿತ್ರರಂಗ ನಿರ್ಮಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಅವರನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬಂದಿತು ಎಂದು ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಶಾಂತರಾಜು, ಸುದ್ದಿಬಿಂಬ ಸತೀಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

(Visited 2 times, 1 visits today)