ಭಾರತದ ಮೊದಲ ಗೃಹ ಮಂತ್ರಿ, ಭಾರತದ ಏಕೀಕರಣಕ್ಕಾಗಿ ಶ್ರಮಿಸಿದ ಧೀಮಂತ, ರಕ್ತರಹಿತ ಕ್ರಾಂತಿಯ ನೇತಾರ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಸುಮಾರು ಐನೂರಕ್ಕೂ ಹೆಚ್ಚು ಆಶ್ರಿತ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದಂತಹ ಆಡಳಿತವನ್ನು ಸಮಗ್ರ ಭಾರತವೆಂಬ ಒಂದೇ ಚೌಕಟ್ಟಿನಲ್ಲಿ ತರಲು ಶಸ್ತ್ರ ಹಿಡಿಯದೆ ಶ್ರಮ ವಹಿಸಿ ಯಶಸ್ವಿಯಾದ ಧೀಮಂತರು.


ಅಹರ್ನಿಶಿ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾದ ಇವರು 1875 ರ ಅಕ್ಟೋಬರ್ 31 ರಂದು ಗುಜರಾತ್ ರಾಜ್ಯದ ನದಿಯಾಡ್ ಎಂಬ ಗ್ರಾಮದಲ್ಲಿ ರೈತ ಕುಟುಂಬವೊಂದರಲ್ಲಿ ಜನಿಸಿದರು. ವಿಠಲಭಾಯಿ ಪಟೇಲ್ ಇವರ ಸೋದರರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಇಬ್ಬರೂ ಸೋದರರು ವಹಿಸಿದ ಪಾತ್ರ ಅವಿಸ್ಮರಣೀಯ.
ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಕಾನೂನು ಪದವೀಧರರಾಗಿ ವಕೀಲ ವೃತ್ತಿಯನ್ನು ಹಲವಾರು ವರ್ಷಗಳ ಕಾಲ ನಿರ್ವಹಿಸಿ ಯಶಸ್ಸು ಕಂಡವರು. ನಿರಪರಾಧಿಗಳನ್ನು ಶಿಕ್ಷೆಯಿಂದ ತಪ್ಪಿಸುವಲ್ಲಿ ಪಟೇಲರು ಹೆಚ್ಚು ಶ್ರಮ ವಹಿಸುತ್ತಿದ್ದರು.
ಒಂದು ಸಲ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಕುರಿತು ವಾದಿಸುತ್ತಿದ್ದಾಗ ಅವರ ಹೆಂಡತಿ ತೀರಿಕೊಂಡ ಸುದ್ದಿ ಬಂದಿತಂತೆ. ಅವರು ಆ ಕ್ಷಣದಲ್ಲಿ ಸ್ವಲ್ಪವೂ ಸಹ ವಿಚಲಿತರಾಗದೆ ತಮ್ಮ ವಾದ ಮುಂದುವರೆಸಿ ಒಬ್ಬ ನಿರಪರಾಧಿಗೆ ಆಗುತ್ತಿದ್ದ ಶಿಕ್ಷೆಯನ್ನು ತಪ್ಪಿಸಿದ್ದರಂತೆ. ಆಗ ಅವರ ಗೆಳೆಯರು “ನಿಮ್ಮ ಹೆಂಡತಿ ತೀರಿಕೊಂಡಿದ್ದರೂ ನೀವು ಕೇಸು ನಿಲ್ಲಿಸದೆ ವಾದ ಮುಂದುವರೆಸಿದಿರಲ್ಲ ಏಕೆ?” ಎಂದು ಪ್ರಶ್ನಿಸಿದಾಗ, ಪಟೇಲರು “ಅವಳು ಆಗಲೇ ತೀರಿ ಹೋಗಿಯಾಗಿತ್ತು. ನಾನು ಹೋಗಿ ಏನು ಮಾಡಬಹುದಿತ್ತು? ಆದರೆ ಹಾಗೆ ಹೋಗಿದ್ದರೆ ಇಲ್ಲಿ ಒಬ್ಬ ನಿರಪರಾಧಿ ಮರಣ ದಂಡನೆಗೆ ಗುರಿಯಾಗಿಬಿಡುತ್ತಿದ್ದ” ಎಂದು ನಗುಮುಖದಿಂದ ಹೇಳಿ ಮನೆಗೆ ಹೋದರಂತೆ…!!
ಒಮ್ಮೆ ವಲ್ಲಭಭಾಯಿ ಪಟೇಲರು ತಮ್ಮ ಕ್ಲಬ್‍ನಲ್ಲಿ ಮಹಾತ್ಮ ಗಾಂಧೀಜಿಯವರ ಭಾಷಣ ಕೇಳುವ ಅವಕಾಶ ಪಡೆದರು. ಗಾಂಧೀಜಿಯವರ ಧೋರಣೆ ಹಾಗೂ ಅಹಿಂಸಾ ನೀತಿಯನ್ನು ತಿಳಿದಿದ್ದ ಪಟೇಲರು ಅವರನ್ನು ಅಪಹಾಸ್ಯ ಮಾಡಿದ್ದರು. ಆದರೆ ಈಗ ಅವರ ಮಾತುಗಳಿಂದ ಪ್ರಭಾವಿತರಾಗಿ ಅವರ ಪ್ರಭಾವಲಯದಲ್ಲಿ ಒಬ್ಬರಾಗಿ ತಮ್ಮನ್ನು ಭಾರತ ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು. ಗಾಂಧೀಜಿಯವರ ಪರಮಶಿಷ್ಯರಾದರು.
ರೈತ ಕುಟುಂಬದಲ್ಲಿ ಜನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ರೈತರ ಬಗೆಗೆ ವಿಶೇಷ ಕಾಳಜಿ ಇತ್ತು. ರೋಗ, ಕ್ಷಾಮ, ಬರಗಾಲ, ಪ್ರವಾಹಗಳ ಕಾಲದಲ್ಲಿ ರೈತ ಕಾರ್ಮಿಕರಿಗೆ ಅವರು ನೆರವಾದರು. ಹರಿಜನರ ಪರವಾಗಿಯೂ ಪಟೇಲರು ಹೋರಾಡಿದವರು.
ಮಹಾತ್ಮ ಗಾಂಧೀಜಿಯವರು ಬ್ರಿಟೀಷರು ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದ ಕಾರಣದಿಂದಾಗಿ ಅದರ ವಿರುದ್ಧವಾಗಿ ಉಪ್ಪಿನ ಸತ್ಯಾಗ್ರಹ ಕೈಗೊಂಡಾಗ ಪಟೇಲರೂ ಆ ಸತ್ಯಾಗ್ರಹದಲ್ಲಿ ಭಾಗಿಯಾದರು. ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವದೇಶ-ಸ್ವರಾಜ್ಯಗಳಿಗಾಗಿ ತಮ್ಮ ವಕೀಲ ವೃತ್ತಿಯಿಂದ ಸಂಪಾದಿಸಿದ ಹಣ, ಮನೆ ಎಲ್ಲವನ್ನು ಧಾರೆ ಎರೆದು ತನ್ನನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡರು.
ಗಾಂಧೀಜಿಯವರ ಅಸಹಕಾರ ಚಳುವಳಿ, ಅಹಿಂಸೆ, ಸತ್ಯಾಗ್ರಹಗಳಿಂದಾಗಿ ಭಾರತಕ್ಕೆ 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಲಭಿಸಿತು. ಆದರೆ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದ್ದುದರ ಪರಿಣಾಮವಾಗಿ ಭಾರತದಲ್ಲಿ ಬಿರುಕು ಮೂಡಿತ್ತು.
ಪಟೇಲರು ನೆಹರುರವರ ಸಚಿವ ಸಂಪುಟದಲ್ಲಿ ಉಪ ಪ್ರಧಾನಿಯಾಗಿ, ಗೃಹ ಮಂತ್ರಿಯಾಗಿ ದೇಶದ ಒಳಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪಟೇಲರು ಸ್ವಾತಂತ್ರ್ಯಾನಂತರ ಬೇರ್ಪಟ್ಟ ಸಂಸ್ಥಾನಗಳನ್ನು ಸಮಗ್ರವಾಗಿ ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಹೈದರಾಬಾದಿನ ನಿಜಾಮ ಪಟೇಲರ ಕೋರಿಕೆಗೆ ನಕಾರ ಸೂಚಿಸಿ ಭಾರತದಲ್ಲಿ ವಿಲೀನವಾಗಲು ಹಿಂಜರಿದಾಗ ಅವನನ್ನು ಬಗ್ಗುಬಡಿಯಲು ಸೈನ್ಯವನ್ನು ಪ್ರವೇಶಿಸುವಂತೆ ಮಾಡಬೇಕಾಯಿತಷ್ಟೇ. ಆದರೆ ಅಲ್ಲಿಯೂ ಸಹ ಯಾವುದೇ ರಕ್ತಪಾತವಾಗದಂತೆ ನೋಡಿಕೊಳ್ಳಲಾಯಿತು. ದೇಶದ ಏಕತೆ ಹಾಗೂ ಸಮಗ್ರತೆಗೆ ಪಟೇಲರ ಕೊಡುಗೆ ಅಪಾರವಾದುದು.
ಹಲವು ಶತಮಾನಗಳ ಹಿಂದೆ ತನ್ನ ದಂಡಯಾತ್ರೆ ಕಾಲದಲ್ಲಿ ಮಹಮ್ಮದ್ ಘಜ್ನಿ ನಾಶಪಡಿಸಿದ್ದ ಗುಜರಾತಿನ ಶ್ರೀ ಸೋಮನಾಥ ದೇವಾಲಯದ ಪುನರ್‍ನಿರ್ಮಾಣಕ್ಕೆ ಹೆಚ್ಚು ಶ್ರಮಿಸಿದರು. ಆದರೆ ದುರದೃಷ್ಟವಶಾತ್ ಅದು ಪೂರ್ಣಗೊಂಡಾಗ ಪಟೇಲರು ಕಾಲವಾಗಿದ್ದರು.
ಗಾಂಧೀಜಿ, ನೆಹರೂ, ಪಟೇಲರು ಈ ಮೂವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಬ್ಬರನ್ನು ಬಿಟ್ಟು ಒಬ್ಬರಿರದಂತೆ ಇದ್ದರು. ಗಾಂಧೀಜಿ ಉಳಿದ ಇಬ್ಬರನ್ನು ಸಮಾನವಾಗಿ ಕಂಡಿದ್ದರು. ಆದರೂ ಪಟೇಲರು ಮತ್ತು ನೆಹರೂ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಇಬ್ಬರೂ ದೇಶದ ಏಕತೆ ಮತ್ತು ಪ್ರಗತಿಗಾಗಿ ಒಟ್ಟಿಗೆ ದುಡಿಯಬೇಕೆಂದು ಗಾಂಧೀಜಿ ಹೇಳಿದ್ದರಂತೆ. 1948 ರ ಜನವರಿ 30 ರಂದು ಗಾಂಧೀಜಿಯವರು ಪಟೇಲರನ್ನು ಭೇಟಿಯಾಗಿ ನೆಹರೂರವರ ಜೊತೆ ಸರಿಸಮನಾಗಿ ದುಡಿದು ಭಾರತದ ಸ್ವಾತಂತ್ರ್ಯವನ್ನು ಕಾಪಾಡಲು ಹೇಳಿದ್ದರಂತೆ. ಆಯಿತೆಂದು ಪಟೇಲರು ಬಾಪೂಜಿಗೆ ನಮಸ್ಕರಿಸಿ ಇನ್ನೂ ಮನೆ ಸೇರಿದ್ದರೋ ಇಲ್ಲವೋ ಎನ್ನುವಷ್ಟರಲ್ಲಿ ಗಾಂಧೀಜಿಯವರ ಹತ್ಯೆಯಾಯಿತೆಂದು ತಿಳಿದು ಹತ್ಯೆಯಾದ ಜಾಗಕ್ಕೆ ಧಾವಿಸಿ ಬಂದರು. ನೆಹರೂರವರು ಆಗಲೇ ಬಂದು ಸೇರಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಪಾರವಾಗಿ ಶೋಕಿಸಿದರಂತೆ. ಗೃಹ ಮಂತ್ರಿಯಾಗಿ ಗಾಂಧೀಜಿಯವರ ಪ್ರಾರ್ಥನಾ ಸಭೆಗಳಿಗೆ ಪೊಲೀಸ್ ರಕ್ಷಣೆ ಕೊಡುತ್ತೇವೆಂದರೂ ಗಾಂಧೀಜಿ ಬೇಡವೆಂದರು. ಈಗ ಅವರ ಸಾವಿನಲ್ಲಿ ಪಟೇಲರು ನೆಹರುರವರೊಡನೆ ಸಂತೋಷದಿಂದ, ಸಾಮರಸ್ಯದಿಂದ ದುಡಿದುದೇ ಭಾರತದ ಸಮಗ್ರತೆಗೆ ನೆರವಾಯಿತು.
ಪಟೇಲರು 1950 ರ ಡಿಸೆಂಬರ್ 15 ರಂದು ಇನ್ನಿಲ್ಲವಾದರು. ಪಟೇಲರ ದೂರದರ್ಶಿತ್ವ, ಸಮಗ್ರ ಭಾರತದ ಐಕ್ಯತೆಯ ಮುಂಬೆಳಕಿನ ಫಲವೇ ಇಂದು ನಾವೆಲ್ಲರೂ ಭಾರತ ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗುವಂತೆ ಮಾಡಿದೆ ಎಂದರೆ ಅತಿಶಯೋಕ್ತಿಯೆನಿಸದು! ಇಂತಹ ಮಹನೀಯನಿಗೆ ಅಂದಿನ ಭಾರತ ಸರ್ಕಾರ ಜೂನ್ 17, 1991 ರಂದು ತಡವಾಗಿಯಾದರೂ ಇವರ ಸೇವೆಯನ್ನು ಮನಗಂಡು ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.

(Visited 1 times, 1 visits today)