ತುಮಕೂರು:
“ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು’’ ಎಂದು ಸಾರುತ್ತಾ ಸ್ತ್ರೀ ಪುರುಷ ಸಮಾನತೆಯ ತತ್ತ ್ವವನ್ನು, ಲೋಕಕ್ಕೆ ತಿಳಿಸಿ, ಹೆಣ್ಣಿನ ಬಗೆಗಿನ ಅನೇಕ ಮೌಢ್ಯಗಳಿಗೆ, ಕಂದಾಚಾರಗಳಿಗೆ ದಿಟ್ಟತೆಯ ಉತ್ತರವನ್ನು ನೀಡಿದ ವೈಚಾರಿಕ ಚಿಂತನೆ ಮಾಡಿದ ವೀರವಿರಾಗಿಣಿ ಅಕ್ಕಮಹಾದೇವಿ ಕನ್ನಡದ ಮೊಟ್ಟಮೊದಲ ಕವಯತ್ರಿ ಹಾಗೆಯೇ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ. ಲಭ್ಯವಿರುವ 434 ವಚನಗಳಲ್ಲೂ ಅಕ್ಕ ಸಮಾಜ ಚಿಂತನೆಯ ಜೊತೆ ಆಧ್ಯಾತ್ಮದ ಔನ್ನತ್ಯವನ್ನು ಅನುಭಾವಿಕ ವಿಸ್ತಾರವನ್ನು ಅಭಿವ್ಯಕ್ತಿಸಿದ್ದಾಳೆ. ವಚನ ಸಾಹಿತ್ಯ ರಚನೆಯಲ್ಲಿಯೇ ಅಕ್ಕನದು ಮೇರು ಪ್ರತಿಭೆ. ಮಹಿಳೆಯ ಮೇಲೆ ನಡೆಯುವ ಕೌಟುಂಬಿಕ ಸಾಮಾಜಿಕ ದೌರ್ಜನ್ಯಗಳನ್ನು ಮೆಟ್ಟಿನಿಂತು, “ಸಾವ ಕೆಡುವ ಗಂಡಂದಿರ ಒಲೆಯೊಳಗಿಕ್ಕು’’ ಎಂದು ಪುರುಷ ಪ್ರಧಾನ ವ್ಯವಸ್ಥೆಗೇ ಸವಾಲು ಹಾಕಿದವಳು ಅಕ್ಕ. ಇಂದಿಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ, 12ನೆಯ ಶತಮಾನದಲ್ಲೇ ದಿಟ್ಟವಾಗಿ ಉತ್ತರ ಹೇಳಿದ ಅಕ್ಕ ಎಲ್ಲ ಕಾಲಕ್ಕೂ ಅಂದಿನ, ಇಂದಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾದವಳು ಅಕ್ಕಮಹಾದೇವಿಯ ಅನುಭಾವಿಕ ಸತ್ಯಗಳು ಲೋಕಪೂಜಿತವಾದವುಗಳು” ಎಂದು ಲೇಖಕಿ, ಮಹಿಳಾ ಚಿಂತಕಿ, ಡಾ. ಬಿ.ಸಿ. ಶೈಲಾನಾಗರಾಜ್ ತಿಳಿಸಿದರು. ಅವರು ವಿಜಯನಗರ ಮಹಿಳಾ ಸಂಘ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶರಣೆ ಬಸವತತ್ವ ಸಾಧಕಿ ಅಕ್ಕನಾಗಮ್ಮ ಮಾತನಾಡುತ್ತಾ, “ಲೌಕಿಕಕ್ಕೆ ಬೆನ್ನು ತಿರುಗಿಸಿ, ಆಧ್ಯಾತ್ಮದ ಉತ್ತುಂಗಕ್ಕೆ ಏರಿದ ಅಕ್ಕಮಹಾದೇವಿ ಬಸವಾದಿ ಪ್ರಮಥರಿಗೆ ತಾಯಿಯಾದವಳು.
ಅಕ್ಕನ, ನಡೆ, ನುಡಿ ಎಲ್ಲರಿಗೂ ಆದರ್ಶವಾಗಿದ್ದವು ಅಕ್ಕನ ವ್ಯಕ್ತಿತ್ವವೇ ಸಮಾಜಕ್ಕೆ ಮಾದರಿಯಗಿದ್ದವು” ಎಂದು ತಿಳಿಸಿದರು.
ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಸಿದ್ಧರಾಮಣ್ಣ, ಪ್ರಮೀಳಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷೆ ನೀಲಾಂಬಿಕಾ ಶಿವಸ್ವಾಮಿ, ಅಧ್ಯಕ್ಷತೆ ವಹಿಸಿದ್ದರು. ಪುಷ್ಪ, ಭವಾನಮ್ಮ, ಕಲ್ಪನಾ, ಶ್ಯಾಮಲ, ನಾಗಮ್ಮ, ಗಂಗಮ್ಮ, ಕವಿತಾ ಮುಂತಾದವರು ಅಕ್ಕನ ವಚನಗಳನ್ನು ಹಾಡಿದರು. ಶರಣರಾದ ನಾಗಭೂಷಣ್, ಗುರುಮಲ್ಲಪ್ಪ ಉಪಸ್ಥಿತರಿದ್ದರು. ಕಾರ್ಯದರ್ಶಿ ಸವಿತಾ ಸ್ವಾಗತಿಸಿದರು. ಲೇಖಕಿ ರಂಗಮ್ಮ ಹೊದೇಕಲ್ ನಿರ್ವಹಿಸಿದರು.

(Visited 76 times, 1 visits today)