ತುಮಕೂರು


ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಉಲ್ಬಣವಾಗದಂತೆ ಕಟ್ಟೆಚ್ಚರ ವಹಿಸಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸಿ, ಕೋವಿಡ್-19 ತಪಾಸಣೆಯನ್ನು 500ಕ್ಕೆ ಹೆಚ್ಚಿಸಬೇಕು ಮತ್ತು ಪ್ರತಿ ತಾಲ್ಲೂಕಿನಲ್ಲಿಯೂ ಕಣ್ಗಾವಲು ಸಮಿತಿಯನ್ನು ರಚಿಸುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಮತ್ತು ಶುಚಿತ್ವ ಪಾಲಿಸಬೇಕು ಎಂದರಲ್ಲದೇ, ಕೋವಿಡ್-19 ತಡೆಗಟ್ಟಲು ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳಬೇಕು ಮತ್ತು ಹೆಚ್ಚಿನ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮುಂಜಾಗ್ರತಾ ಲಸಿಕೆಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜನತಾ ಬಜಾರ್ ಕೇಂದ್ರದಲ್ಲಿ ಇನ್ನೊಂದು ವಾರದೊಳಗಾಗಿ ಜನೌಷಧಿಗಳು ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಬಿತ್ತನೆ ಬೀಜ ರೈತರಿಗೆ ಸಕಾಲಕ್ಕೆ ತಲುಪಿಸಬೇಕು. ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಂದ ಯಾವುದೇ ದೂರು ಬಾರದಂತೆ ಇಲಾಖೆಯು ಎಚ್ಚರ ವಹಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತ ಪಟ್ಟಿದ್ದು, ಸರ್ಕಾರದ ಪರಿಹಾರಗಳನ್ನು ಸಂತ್ರಸ್ತ ಕುಟುಂಬದವರಿಗೆ ತಲುಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸಭೆಗೆ ಮಾಹಿತಿ ನೀಡಿದರು.
ಸಿಡಿಲು ಬಡಿದು 3 ದನ, 3 ಎಮ್ಮೆ ಸೇರಿದಂತೆ ಒಟ್ಟು 47 ಪ್ರಾಣಿಗಳು ಸಾವಿಗೀಡಾಗಿದ್ದು, ತಹಶೀಲ್ದಾರರು ಸ್ಥಳ ಪರಿಶೀಲಿಸಿ ಪರಿಹಾರವನ್ನು ಈಗಾಗಲೇ ವಿತರಿಸಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಬಿ. ನಾಗೇಂದ್ರಪ್ಪ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಒಟ್ಟು 5 ಸಕ್ರಿಯ ಪ್ರಕರಣಗಳು ದಾಖಲಾಗಿದೆ. 12-14 ವರ್ಷದ ಮಕ್ಕಳಿಗೆ ಶೇ. 100 ರಷ್ಟು ಲಸಿಕೆ ನೀಡಲಾಗಿದೆ, 15-17 ವರ್ಷದ ಮಕ್ಕಳಿಗೆ ಶೇ. 78ರಷ್ಟು ಲಸಿಕೆ ನೀಡಲಾಗಿದೆ ಮತ್ತು ಜಿಲ್ಲೆಯಲ್ಲಿ 61 ಸಾವಿರ ಡೋಸ್ ಲಸಿಕೆ ದಾಸ್ತಾನು ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಾಧಿಸಿರುವ ಪ್ರಗತಿಯ ಕುರಿತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕೆ. ವಿದ್ಯಾಕುಮಾರಿಯವರಿಂದ ಮಾಹಿತಿ ಪಡೆದ ಸಚಿವರು, ಪ್ರತಿಕ್ರಿಯಿಸಿ ಯೋಜನೆಯಡಿ ನಿಗಧಿತ ಗುರಿಯನ್ನು ತಲುಪಬೇಕು. ಸ್ಥಳೀಯ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಶಾಲಾ-ಕಟ್ಟಡ ದುರಸ್ತಿ, ಶಾಲಾ ಕಾಂಪೌಂಡ್, ಕೆರೆ ಹೂಳೆತ್ತುವುದು ಸೇರಿದಂತೆ ಅನೇಕ ಕೆಲಸಗಳನ್ನು ತ್ವರಿತವಾಗಿ ಮುಗಿಸುವಂತೆ ಸೂಚಿಸಿದರು.

(Visited 2 times, 1 visits today)