ತುಮಕೂರು:


ಭಾರತದ ಪ್ರಜೆಗಳಾದ ನಮ್ಮೆಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನವು ಒದಗಿಸಿಕೊಟ್ಟಿದೆ. ಆದರೆ ಮಲ ಹೊರುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜರ್)ಯಂತಹ ಅನಿಷ್ಟ ವ್ಯವಸ್ಥೆಯಿಂದಾಗಿ ಹಲವರು ಇಂದಿಗೂ ಸಹಾ ಈ ಹಕ್ಕಿನಿಂದ ವಂಚಿತರಾಗಿದ್ದಾರೆ. ಗತಕಾಲದಿಂದ ನಡೆಯುತ್ತಿರುವ ಈ ಅನ್ಯಾಯವನ್ನು ಮತ್ತು ಅಗೌರವದ ಬದುಕನ್ನು ಸರಿಪಡಿಸುವ ಸಲುವಾಗಿ ‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013’ನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ಆಯೋಜಿಸಲಾಗಿದ್ದ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಕಾಯ್ದೆಯ ಕುರಿತು ಮನದಟ್ಟು ಮಾಡುತ್ತಾ, ಈ ಮೇಲಿನಂತೆ ಅವರು ತಿಳಿಸಿದರು.
ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೆಪ್ಟಿಕ್ ಟ್ಯಾಂಕ್/ಯುಜಿಡಿಗಳನ್ನು ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಲವನ್ನು ಕೈಯಿಂದ ಎತ್ತಿ ಹಾಕುವ ಕಾರ್ಯಗಳಲ್ಲಿ ತೊಡಗದಂತೆ(ಮ್ಯಾನ್ಯುಯಲ್ ಸ್ಕ್ಯಾವೆಜಿಂಗ್) ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ದೇಶದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್(ಮಲ ಹೊರುವ ಪದ್ಧತಿ) ವೃತ್ತಿ ತಡೆಗಟ್ಟಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ದೇವರಾಜು ಅರಸು ಅವರ ಕಾಲದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು, ಮಲಹೊರುವ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದರೂ ಸಹಾ ಇಂದಿಗೂ ಹಲವೆಡೆ ಈ ಪದ್ಧತಿ ಜೀವಂತವಾಗಿರುವುದು ವಿಷಾಧನೀಯ ಎಂದು ಎಂ. ಶಿವಣ್ಣ ತಿಳಿಸಿದರು.
ಪೌರ ಕಾರ್ಮಿಕರ ಕಾಲೋನಿಯಲ್ಲಿ ನೈರ್ಮಲ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸಬೇಕು. ಯಂತ್ರಗಳ ಯುಗದಲ್ಲಿಯೂ ಮಾನವನನ್ನು ಬಳಕೆ ಮಾಡಿಕೊಂಡು ಅನೈರ್ಮಲ್ಯ ಕೆಲಸವನ್ನು ಮಾಡಿಸುತ್ತಿದ್ದು, ಅದನ್ನು ತೊಡೆದು ಹಾಕಿ ಈ ಜನರನ್ನು ಸಮಾಜದ ಇತರರಂತೆ ಬಾಳಲು ಅವಕಾಶ ಕಲ್ಪಿಸಬೇಕು.
ಕುಣಿಗಲ್ ತಾಲ್ಲೂಕಿನಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡದೇ, ಸಮವಸ್ತ್ರ ನೀಡದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ. ಚಿ.ನಾ. ಹಳ್ಳಿಯಲ್ಲಿ 2011ರಿಂದ 2018ರವರೆಗೆ ಸುಮಾರು 60 ಲಕ್ಷ ಪಿ.ಎಫ್. ಹಣ ದುರ್ಬಳಕೆ ಆಗಿದೆ. ಇದಕ್ಕೆ ಕಾರಣರಾದ ಸಂಬಂಧಿಸಿದ ಮುಖ್ಯಾಧಿಕಾರಿ ಹಾಗೂ ಪರಿಸರ ಅಭಿಯಂತರರ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸೂಚಿಸಲಾಯಿತು.
ಸ್ಥಳೀಯ ನಗರ ಸಂಸ್ಥೆಗಳಲ್ಲಿ ಪೌರ ಕಾಮಿಕರಿಗೆ 3 ತಿಂಗಳಿಗೊಮ್ಮೆ ವಿವಿಧ ತಜ್ಞರ ತಂಡದೊಂದಿಗೆ ಪೌರ ಕಾಮಿಕರ ಆರೋಗ್ಯವನ್ನು ತಪಾಸಣೆ ಮಾಡಿಸಬೇಕು. ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಶೌಚಾಲಯಗಳನ್ನು ಸ್ಯಾನಿಟರಿ ಶೌಚಾಲಯಗಳನ್ನಾಗಿ ಪರಿವರ್ತಿಸಬೇಕು ಎಂದು ತಿಳಿಸಿದರು.
ತುಮಕೂರು ಮಹಾನಗರಪಾಲಿಕೆಯಿಂದ ನಗರ ನೈರ್ಮಲ್ಯದ ಹಿತದೃಷ್ಟಿಯಿಂದ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಪೌರ ಕಾರ್ಮಿಕರಿಗೆ ಕೆಲಸದ ಮದ್ಯೆ ಹಸಿವು ನೀಗಲು ಗುಣಮಟ್ಟದ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರಲ್ಲದೆ, ಪೌರಕಾಮಿಕರಿಗೆ ಇ.ಎಸ್.ಐ. ಮತ್ತು ಪಿ.ಎಫ್. ಸೌಲಭ್ಯ ಕಲ್ಪಿಸಿ ಸೂಕ್ತ ದಾಖಲಾತಿಗಳೊಂದಿಗೆ ವರದಿ ಮಾಡಲು ಸೂಚಿಸಲಾಯಿತು ಹಾಗೂ ಪೌರ ಕಾರ್ಮಿಕರಿಗೆ ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸಲು ಗಂ ಬೂಟ್ಸ್, ಹ್ಯಾಂಡ್ ಗ್ಲೌಸ್, ಮಾಸ್ಕ್ ಸೇರಿದಂತೆ ಮತ್ತಿತರ ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಿ ವಿತರಿಸಲು ಸೂಚಿಸಲಾಯಿತು.
2013ರ ಕಾಯ್ದೆಯನ್ನು ಪಿಡಿಒಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ತುಮಕೂರು ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯತಿಗಳಿವೆ. ಮಲಹೊರುವ ಪದ್ದತಿ ಪುರಾತನ ಕಾಲದಿಂದ ಜೀವಂತವಾಗಿದ್ದು, ಮಲಹೊರುವ ಪದ್ಧತಿಗಳಲ್ಲಿ ತೊಡಗಿಕೊಳ್ಳುವ ಕಾರ್ಮಿಕರನ್ನು ಗುರುತಿಸಬೇಕು ಹಾಗೂ ಮಲ ಹೊರುವ ಕೆಲಸ ಮಾಡಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅನ್ಯರ್ಮಲ್ಯ ಶೌಚಾಲಯಗಳನ್ನು ಗುರ್ತಿಸಬೇಕು ಎಂದರು. ನಗರಸಭೆಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹಗಳು ಕಡಿಮೆ ಇರುವುದರಿಂದ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಿ ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಕ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸೇರಿದತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಒಗಳು ಹಾಜರಿದ್ದರು.

(Visited 14 times, 1 visits today)