ತುಮಕೂರು:

       ಕೊರೊನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ನೀಡಿ, ಇದೀಗ ಎರಡು ತಿಂಗಳು ತಾಳ್ಮೆಯಿಂದ ಕಾಯ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯನಿರತರಾದ ಆಶಾಗಳಿಗೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಮತ್ತೇ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.

      ಅಂತೆಯೇ ರಾಜ್ಯದಾದ್ಯಂತ ಎಲ್ಲಾ ಶಾಸಕರು, ಸಂಸದರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಆಶಾ ಪರ ಧ್ವನಿಯೆತ್ತುವಂತೆ ಆಗ್ರಹಿಸಲಾಗುವುದು. ಹಾಗೆಯೇ ದಿನಾಂಕ 21 ರಿಂದ 10 ದಿನಗಳ ಕಾಲ ನಡೆಯುವ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು.

      ಕಳೆದ ಸುಮಾರು 10-11 ವರ್ಗಗಳಿಂದ ಆಶಾ ಕಾರ್ಯಕರ್ತೆಯರು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ಕಾಯಾ ವಾಚಾ ಮನಸಾ ಜಾರಿಗೊಳಿಸುತ್ತ ಬಂದಿದ್ದಾರೆ. ಸಧ್ಯದ ಕೋವಿಡ್ ಹೆಮ್ಮಾರಿಯ ಪಿಡುಗಿನ ಕಾಲದಲ್ಲಂತೂ ಅವರ ಅವಿರತ ಶ್ರಮದ ಸೇವೆಯನ್ನು ಪ್ರಶಂಸೆ ಮಾಡದವರೆ ಇಲ್ಲ. ಆದರೆ ಇಂತಹ ಅಸಾಮಾನ್ಯ ಸೇವೆಗಾಗಿ ಅವರಿಗೆ ದೊರಕುವ ಸಂಭಾವನೆಯಂತೂ ಅತಿ ನಿಕೃಷ್ಟ. ಅಲ್ಲದೆ, ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್ ಲೈನ್ ಪೋರ್ಟಲ್‍ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018 ಮತ್ತು 2019 ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಬರಬೇಕಾಗಿದ್ದ 15-25 ಸಾವಿರ ದಷ್ಟು ಹಣ ಬರದೇ ನಷ್ಟ ವಾಗಿರುವುದು ಇನ್ನೂ ಆಶಾಗಳಿಗೆ ಅದನ್ನು ಕೊಡುವ ವ್ಯವಸ್ಥೆ ಆಗಿಲ್ಲ. ಈಗಲೂ ತಿಂಗಳ ಕೆಲಸಕ್ಕೆ ತಕ್ಕಷ್ಟ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿತ ಹೆಚ್ಚಿದೇ ಹೊರತು ದುಡಿದ ಹಣ ಮಾತ್ರ ಕೈಗೆ ಬರುತ್ತಿಲ್ಲ. ಇದರಿಂದಾಗಿ ಮುಂದುವರಿದ ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ. ಹಲವು ತಿಂಗಳುಗಳಿಂದ ಕೋವಿಡ್ ಕೆಲಸದಲ್ಲಿ ನಿಷ್ಠೆಯಿಂದ ತೊಡಗಿರುವುದು ತಮಗೆ ತಿಳಿದ ವಿಷಯವಾಗಿದೆ. ಆದರೆ ಆಶಾಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ವೇತನ ಮಾತ್ರ ಸಿಗುತ್ತಿಲ್ಲ. 12,000 ರೂ ಬೇಡಿಕೆ ಸಹ ವಾಸ್ತವಿಕವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲವೆಂದೂ ಸಂಘವು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ. ಏಕೆಂದರೆ ನಮ್ಮ ರಾಜ್ಯದಲ್ಲಿ, ರೂ.4000 ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಕೇಂದ್ರ ಸರ್ಕಾರದಿಂದ ಚಟುವಟಿಕೆಗಳನ್ನು ಆಧರಿಸಿ ನೀಡುವ ಪ್ರೋತ್ಸಾಹಧನ ಸರಾಸರಿ ರೂ. 6000, ಎರಡೂ ಸೇರಿ ಸುಮಾರು ರೂ. 10,000 ಪಡೆಯುವಂತೆ ಯೋಜನೆ ಇದೆ. ಮತ್ತು ಇದಕ್ಕೆ ಸರ್ಕಾರದ ಅನುದಾನವೂ ಇದೆ. ಆದರೆ ಅದು ಇದುವರೆಗೂ ಸರಿಯಾಗಿ ತಲುಪುತ್ತಿಲ್ಲ. ಅಂತೆಯೇ ಇದಕ್ಕೆ ಇನ್ನೊಂದಿಷ್ಟು ಹಣವನ್ನು ಸೇರಿಸಿ ರೂ 12,000 ನಿಗದಿಯಾಗಿ ಕೊಡುವುದು ಸರ್ಕಾರಕ್ಕೆ ಕಷ್ಟವಾಗಲಾರದೆಂದೂ ತಿಳಿಸಿದ್ದೇವೆ.

      ಆದ್ದರಿಂದ ತಮ್ಮ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಲು ಅವರು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ಜರುಗಿದ ರಾಜ್ಯ ಮಟ್ಟದ ಚಳುವಳಿಯನ್ನು ಆರೋಗ್ಯ ಮಂತ್ರಿಗಳ ಆಶ್ವಾಸನೆಯೊಂದಿಗೆ ಹಿಂಪಡೆಯಲಾಗಿತ್ತು. ಆದರೆ ಈ ಭರವಸೆ ಭರವಸೆಯಾಗಿಯೇ ಉಳಿಯಿತು.

      ನಂತರದ ದಿನಗಳಲ್ಲಿ ಕೋವಿಡ್ ಹೆಮ್ಮಾರಿಯ ವಿರುದ್ಧ ಆಶಾ ಕಾರ್ಯಕರ್ತೆಯರು ಕಾರ್ಯಪ್ರವೃತ್ತರಾದರು. ಈ ಹಿನ್ನೆಲೆಯಲ್ಲಿ ಕಳೆದ ಜುಲೈ 10 ರಿಂದ 29 ರವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಕನಿಷ್ಟ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದುದು ಇಡೀ ರಾಜ್ಯದ ಜನತೆಗೆ ತಿಳಿದಿರುವ ವಿಷಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ “ಮುಂಚೂಣಿ ಯೋಧ” ರೆಂದು ಕರೆಯಿಸಿಕೊಂಡ ಇವರ ಕನಿಷ್ಟ ಬೇಡಿಕೆಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿತು.

     ಇಂತಹ ಸನ್ನಿವೇಶದಲ್ಲಿ ಆಶಾ ಸೋದರಿಯರ ದಿಟ್ಟ ಹೋರಾಟಕ್ಕೆ ಇಡೀ ರಾಜ್ಯದ ಜನತೆಯೇ ಸ್ಪಂದಿಸಿತು. ರೈತ ಕಾರ್ಮಿಕರಾದಿಯಾಗಿ ಸಮಸ್ತ ಜನತೆ ಇವರ ಬೇಡಿಕೆಗಳನ್ನು ಬೆಂಬಲಿಸಿದರು. ಆಡಳಿತ ಪಕ್ಷದ ಮಂತ್ರಿವರ್ಯರು, ನಾಯಕರು, ವಿರೋಧ ಪಕ್ಷಗಳ ಮುಖಂಡರುಗಳು ಸಹ ಬೇಡಿಕೆಗಳ ಪರವಾಗಿ ತಮ್ಮ ಧ್ವನಿ ಎತ್ತಿದರು. ರಾಜ್ಯದ ಸಾಕ್ಷಿ ಪ್ರಜ್ಞೆಯರಾದ ಶ್ರೀಯುತ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಡಾ. ಸಿದ್ದಲಿಂಗಯ್ಯ, ರೂಪ ಹಾಸನ, ಡಾ. ನಂಜರಾಜೇ ಅರಸ್, ಮುಂತಾದವರು ತಾವಾಗಿಯೇ ಆಶಾಗಳ ಬೆನ್ನೆಲುಬಾಗಿ ನಿಂತರು. ತಮ್ಮ ನಿಷ್ಠಾವಂತ ದುಡಿಮೆಯ ನಡುವೆಯೇ ಹೋರಾಟನಿರತರಾದ ಈ ಮಹಿಳಾಮಣಿಗಳ ಕೆಚ್ಚಿಗೆ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು, ಎಲ್ಲರೂ ತಲೆತೂಗಿದರು. ಹಲವಾರು ಹಿರಿಯಮಂತ್ರಿಗಳು ಸಹ ಬೇಡಿಕೆಗಳಿಗೆ ಸರ್ಕಾರವು ಸ್ಪಂದಿಸಿದೆ ಹಾಗೂ ಸಧ್ಯದಲ್ಲೇ ಸಿಹಿ ಸುದ್ದಿ ಪ್ರಕಟವಾಗುವುದಾಗಿ ವಚನವಿತ್ತರು. ಕೊನೆಗೂ ಆಗಸ್ಟ್ 29 ರಂದು ರಾಜ್ಯಾದ್ಯಂತ ಮುತ್ತಿಗೆ ಕಾರ್ಯಕ್ರಮ ಜರುಗಿದಾಗ ಮುಖ್ಯಮಂತ್ರಿಗಳು ಸಹ ಆಶಾ ಮುಖಂಡರಿಗೆ ಸರ್ಕಾರ ಆಶಾ ಜೊತೆಗಿದೆ, ಶೀಘ್ರ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿ, ಸಚಿವರಿಗೆ ಹಾಗೂ ಅಧಿಕಾರಿಗಳಿಗೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಆಗ ಬೆಂಗಳೂರಿನಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವರಾದ ಶ್ರೀ ಶ್ರೀರಾಮುಲುರವರು 2-3 ದಿನಗಳಲ್ಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತ ನಂತರ ಆಶಾ ಕಾರ್ಯಕರ್ತೆಯರು ತಮ್ಮ 20 ದಿನಗಳ ಐತಿಹಾಸಿಕ ಹೋರಾಟವನ್ನು ತತ್ ಕ್ಷಣಕ್ಕೆ ಸ್ಥಗಿತಗೊಳಿಸಿದರು.

      ಆದ್ದರಿಂದಲೇ ಇದೀಗ ಅನಿವಾರ್ಯವಾಗಿ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. ಮಾತಿನಂತೆ ನಡೆಯದ ಸರ್ಕಾರದ ಅಲಕ್ಷ ಧೋರಣೆ ವಿರುದ್ಧ ಬಲಿಷ್ಠ ಹೋರಾಟವನ್ನು ಕೈಗೊಳ್ಳಬೇಕಾಗಿ ಬಂದಿದೆ. ಆಶಾ ಕಾರ್ಯಕರ್ತೆಯರ ಈ ನ್ಯಾಯೋಚಿತ ಹೋರಾಟವನ್ನು ಎಲ್ಲಾ ಜನರು ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಮನವಿ ಮಾಡುತ್ತದೆ.

(Visited 15 times, 1 visits today)