ತುಮಕೂರು:
ನಗರದ ಬಿ.ಹೆಚ್.ರಸ್ತೆಯ ರಸ್ತೆ ವಿಭಜಕದಲ್ಲಿ ಹಾಕಿದ್ದ ಬೇವಿನ ಮರಗಳನ್ನು ದುಷ್ಕಮಿಗಳು ಕಡಿದಿರುವುದಕ್ಕೂ, ಎಡಿ ಸಿಟಿ ಔಟ್‍ಡೋರ್ ಮೀಡಿಯಾ ಸಲ್ಯೂಷನ್ ಕಂಪನಿಗೂ ಯಾವುದೇ ಸಂಬಂಧವಿಲ್ಲ.ಸಂಸ್ಥೆಯ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ಇಂತಹ ಕೃತ್ಯ ನಡೆಸಿದ್ದು, ನಾವುಗಳು ಸಹ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಎಡಿ ಸಿಟಿ ಔಟ್‍ಡೋರ್ ಮೀಡಿಯಾ ಸಲ್ಯೂಷನ್ ಕಂಪನಿಯ ರಂಗನಾಥ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಳೆದ 10-15 ವರ್ಷಗಳಿಂದ ರಾಜ್ಯಾಧ್ಯಂತ ಜಾಹಿರಾತು ಫಲಕ ಅಳವಡಿಸುವ ಕೆಲಸವನ್ನು ಸಂಸ್ಥೆ ಮಾಡಿಕೊಂಡು ಬಂದಿದೆ. 2015-16ರಲ್ಲಿ ತುಮಕೂರು ನಗರಪಾಲಿಕೆಯ ವ್ಯಾಪ್ತಿಯಲ್ಲಿಯೂ ಜಾಹೀರಾತು ಬಿತ್ತಿ ಫಲಕಗಳನ್ನು ಹಾಕುವ ಟೆಂಡರ್ ಪಡೆದು ಕಾರ್ಯನಿರ್ವಹಿಸಲಾಗುತ್ತಿದೆ. ಎಲ್ಲಿಯೂ ಫಲಕಗಳಿಗೆ ಅಡ್ಡಲಾಗಿರುವ ಮರಗಳನ್ನ ಕಡಿದಿಲ್ಲ ಎಂದರು.
ತುಮಕೂರು ನಗರದಲ್ಲಿ 2022ರ ಜನವರಿ 22ರ ರಾತ್ರಿ ಮತ್ತು ಏಪ್ರಿಲ್ 16ರ ರಾತ್ರಿ ಕೆಲ ಕಿಡಿಗೇಡಿಗಳು ರಸ್ತೆಯಲ್ಲಿ ಹಾಕಿರುವ ಬೇವಿನ ಮರಗಳನ್ನು ಕಡಿದಿದ್ದಾರೆ. ಸಿಸಿಟಿವಿ ಪೂಟೇಜ್‍ನಲ್ಲಿ ಮರಗಳನ್ನು ಕಡಿದವರ ಚಹರೆ ಇದ್ದು, ಅವರನ್ನು ಬಂಧಿಸುವ ಬದಲು ಜಾಹೀರಾತು ಫಲಕ ಅಳವಡಿಸಿರುವ ನಮ್ಮ ಎಡಿ ಸಿಟಿ ಔಟ್‍ಡೋರ್ ಮೀಡಿಯಾ ಸಲ್ಯೂಷನ್ ಸಂಸ್ಥೆಯ ವಿರುದ್ದ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ.
ನಮ್ಮ ವೃತ್ತಿಯಲ್ಲಿ ತೊಡಗಿರುವವರೇ, ಈ ರೀತಿ ಕೃತ್ಯದ ಮೂಲಕ ನಮ್ಮ ಹೆಸರಿಗೆ ಮಸಿಬಳಿದು, ಪರವಾನಗಿ ರದ್ದು ಪಡಿಸಿ, ತಾವು ಪರವಾನಗಿ ಪಡೆಯುವ ಉದ್ದೇಶ ಇರುಬಹುದು ಎಂಬುದು ನಮ್ಮ ಅನುಮಾನ. ಇದರ ಹಿಂದೆ ಜಾಹೀರಾತು ಕ್ಷೇತ್ರದ ಅನಾರೋಗ್ಯಕರ ಪೈಪೋಟಿಯ ಷಡ್ಯಂತ್ರ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಹೊರಗೆಳೆಯುವಂತೆ ಮನವಿ ಮಾಡಲಾಗಿದೆ ಎಂದು ರಂಗನಾಥ್ ತಿಳಿಸಿದರು.
ನಾನು ಮತ್ತು ನನ್ನ ಗೆಳೆಯರು ವಿವಿಧ ಸಂಘ ಸಂಸ್ಥೆಗಳ ಮೂಲಕ ಪರಿಸರ ಆಂದೋಲನಕ್ಕೆ ಹಲವಾರು ವರ್ಷಗಳಿಂದ ನಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದೇವೆ.ಗಿಡ ನೆಡುವುದು, ನೀರೆರೆಯುವುದು, ಬೀಜದುಂಡೆ ತಯಾರಿಕೆ,ನಗರದಲ್ಲಿ 29 ಬಸ್ ಸೆಲ್ಟರ್ ನಿರ್ಮಾಣ, ಹೀಗೆ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ತುಮಕೂರು ಜಿಲ್ಲೆಯಲ್ಲದೆ, ಬೇರೆ ಜಿಲ್ಲೆಗಳಲ್ಲಿಯೂ ಮಾಡಿದ್ದೇವೆ. ತುಮಕೂರು ನಗರಪಾಲಿಕೆಯ ವ್ಯಾಪ್ತಿಯಲ್ಲಿಯೇ ಸಾವಿರಾರು ಗಿಡಗಳನ್ನು ಹಾಕಲಾಗಿದೆ. ಹೀಗಿದ್ದು, ಬೆಳೆಯುತ್ತಿರುವ ಮರಗಳನ್ನು ಕಡಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕೆಲವರು ತಮ್ಮ ಸಾಮ್ರಾಜ್ಯ ಸ್ಥಾಪನೆಗೆ ಇಂತಹ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಈಗಾಗಲೇ ಪಾಲಿಕೆಯವರು, ಅರಣ್ಯ ಇಲಾಖೆಯವರು ನೀಡಿದ ನೋಟಿಷ್‍ಗೆ ಉತ್ತರ ನೀಡಿದ್ದೇವೆ. ಮುಂದೆಯೂ ತನಿಖೆಗೆ ಸಹಕರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಎಡಿ ಸಿಟಿ ಔಟ್‍ಡೋರ್ ಮೀಡಿಯಾ ಸಲ್ಯೂಷನ್ ಕಂಪನಿಯ ನಿಯಮ ಬದ್ದವಾಗಿ ಪಾಲಿಕೆಯ ಟೆಂಡರ್‍ನಲ್ಲಿ ಪಾಲ್ಗೊಂಡು, ಜಾಹೀರಾತು ಫಲಕ ಅಳವಡಿಸುವ ಗುತ್ತಿಗೆ ಪಡೆದಿದೆ. ಅಲ್ಲದೆ ಕೋರೋನ ಸಂದರ್ಭದಲ್ಲಿಯೂ ಪಾಲಿಕೆಗೆ ಕಟ್ಟಬೇಕಾದ ತೆರಿಗೆ ಕಟ್ಟಿಲಾಗಿದೆ.ಪಾಲಿಕೆಯ ಆಡಳಿತ ವರ್ಗವಾಗಲಿ, ಚುನಾಯಿತು ಮಂಡಳಿಯಾಗಲಿ, ಅರಣ್ಯ ಇಲಾಖೆಯಾಗಲಿ, ನಮ್ಮ ಕಾರ್ಯದಲ್ಲಿ ಹಸ್ತು ಕ್ಷೇಪ ಮಾಡಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು,ಕಂಪನಿ ಹೆಸರಿಗೆ ಮಸಿ ಬಳಿಯಲು ಈ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಡಿ ಸಿಟಿ ಔಟ್‍ಡೋರ್ ಮೀಡಿಯಾ ಸಲ್ಯೂಷನ್ ಸಂಸ್ಥೆಯ ಲೋಕೇಶ್, ವಕೀಲರಾದ ಬಸವರಾಜು, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)