ತುಮಕೂರು:
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಸದುಪಯೋಗವನ್ನು ಪಡೆಯಲು ಪ್ರತಿಯೊಬ್ಬ ನಾಗರೀಕನೂ ಆಯುಷ್ಮಾನ್ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಸರ್ಕಾರಿ ಎಂಪ್ರೆಸ್ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ “ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಆಯುಷ್ಮಾನ್-ಭಾರತ್ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬ ನಾಗರೀಕನೂ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಅನುಕೂಲ ಪಡೆದುಕೊಳ್ಳಿ ಎಂದರು.
ಇಂದು ಡಿಜಿಟಲೀಕರಣ ಹೆಚ್ಚಾಗಿರುವ ಕಾರಣ ಎಲ್ಲಾ ನಾಗರೀಕರಿಗೂ ಡಿಜಿಟಲ್ ಆರೋಗ್ಯ ಗುರುತಿನ ಐಡಿ ಕಾರ್ಡ್ ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ರಮವು ದೇಶಾದ್ಯಂತ ಚಾಲನೆಯಲ್ಲಿದೆ. ಸರ್ಕಾರದ ಈ ಯೋಜನೆಯು ಉತ್ತಮ ರೀತಿಯಲ್ಲಿ ಬಳಕೆಯಾಗುವ ಮೂಲಕ ಆಯುಷ್ಮಾನ್ ಕಾರ್ಡ್ ಎಲ್ಲರಿಗೂ ತಲುಪಬೇಕು ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಕಳೆದ ಎರಡು ವರ್ಷಗಳ ಕೋವಿಡ್ ಸಂಕಷ್ಟ ಸಂದರ್ಭ ಜಿಲ್ಲೆಯ ಪ್ರತಿಯೊಂದು ಇಲಾಖೆಗಳು ಬಹಳ ಜಾಗರೂಕತೆಯಿಂದ ಕೆಲಸ ನಿರ್ವಹಿಸಿದ್ದು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರ ಜವಾಬ್ದಾರಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದ ನಿರ್ದೇಶನದಂತೆ ಪ್ರತಿಯೊಂದು ತಾಲ್ಲೂಕು ಹಂತದಲ್ಲಿಯೂ ಆರೋಗ್ಯ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದರಿಂದ ಆರೋಗ್ಯದ ಕಡೆ ಗಮನಹರಿಸುವ ಮೂಲಕ ಆರೋಗ್ಯ ಮೇಳದ ಅನುಕೂಲ ಪಡೆಯಿರಿ ಎಂದು ಸಲಹೆ ನೀಡುವ ಜೊತೆಗೆ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.
ಈ ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗಳ ವಿತರಣೆ, ಡಿಜಿಟಲ್ ಆರೋಗ್ಯ ಹೆಲ್ತ್ ಗುರುತಿನ ಕಾರ್ಡ್ ವಿತರಣೆ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ನೀಡುವಿಕೆ, 25 ಕೌಂಟರ್‍ಗಳಲ್ಲಿ ಅಲೋಪತಿಕ್ ಮತ್ತು ಆಯುರ್ವೇದಿಕ್ ಸೇವೆ ಮತ್ತು ಔಷಧಿ ವಿತರಣೆ, ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ತಪಾಸಣೆ, ಕುಟುಂಬ ಕಲ್ಯಾಣ, ಕಣ್ಣಿನ ಪೊರೆ, ದಂತ ತಪಾಸಣೆ, ಕಿವಿ ತಪಾಸಣೆ, ಚರ್ಮದ ತಪಾಸಣೆ, ಧೂಮಪಾನ ಮತ್ತು ತಂಬಾಕು ಸೇವನೆಯ ಕೆಟ್ಟ ಪರಿಣಾಮಗಳ ಬಗ್ಗೆ, ವೈಯಕ್ತಿಕ/ಪರಿಸರ ನೈರ್ಮಲ್ಯ ಕುರಿತಂತೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ನುರಿತ ಯೋಗಾ ಶಿಕ್ಷಕರಿಂದ ಯೋಗಾಭ್ಯಾಸ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪಾಂಶುಪಾಲೆ ಡಾ. ರಜನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಸ್. ಆರ್. ಲಕ್ಷ್ಮೀಕಾಂತ್, ಉಪವಿಭಾಗಾಧಿಕಾರಿ ವಿ.ಅಜಯ್, ಆರ್.ಸಿ.ಹೆಚ್ ಅಧಿಕಾರಿ ಕೇಶವ್‍ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸರ್ಕಾರಿ ಎಂಪ್ರೆಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಷಣ್ಮುಖ, ಜಿಲ್ಲಾ ಹಾಗೂ ತಲ್ಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಮತ್ತು ಸಾರ್ವಜನಿಕರು ಹಾಜರಿದ್ದರು.

(Visited 193 times, 1 visits today)