ತುಮಕೂರು:


ಜಾರಿ ನಿರ್ದೇಶನಾಲಯ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ವಿನಾ ಕಾರಣ ಇ.ಡಿ. ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ದೇಶದ ಸಂವಿಧಾನದಲ್ಲಿ ಹಲವು ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಹಾಗೆಯೇ ಇ.ಡಿ., ಐ.ಟಿ. ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ. ವಿನಾ ಕಾರಣ ಈ ಸಂಸ್ಥೆಗಳ ಮೇಲೆ ಗೂಬೆ ಕೂರಿಸಬಾರದು ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಇಲಾಖೆ, ಸಂಸ್ಥೆಯ ಅಧಿಕಾರಿಗಳನ್ನು ರಾಜಕೀಯವಾಗಿ ನೋಡಬಾರದು. ಹಾಗೊಂದು ಒಂದು ವೇಳೆ ರಾಜಕೀಯವಾಗಿ ನೋಡುವುದಾದರೆ ಸರ್ಕಾರಗಳು ಬದಲಾದಾಗ ಅಧಿಕಾರಿಗಳು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಕಾನೂನಿನ ಮೇಲೆ ವಿಶ್ವಾಸ ಹೊಂದಿರುವ ಪಕ್ಷ ನಮ್ಮದು. ಕಾನೂನು ನ್ಯಾಯ ಕೊಡುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಯಾರೂ ಕೂಡಾ ಅದರ ವಿರುದ್ಧ ನಡೆಯುವಂತಿಲ್ಲ. ಯಾರಿಗೆ ಕಾನೂನು, ಸುಪ್ರೀಂ ಕೋರ್ಟ್ ಮೇಲೆ ಗೌರವ ಇಲ್ಲವೋ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್‍ನವರಿಗೆ ಬೇರೆ ಯಾವ ವಿಚಾರಗಳು ಸಿಗದೇ ಇದ್ದಾಗ ಈಗ ಇ.ಡಿ. ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡದು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶದಲ್ಲಿ ಉದ್ಯೋಗ ಸಿಗದೆ ಸಾಕಷ್ಟು ಜನ ಪರದಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುದ್ರಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಯುವ ಸಮೂಹ ಸ್ವಂತ ಕಾಲ ಮೇಲೆ ನಿಲ್ಲುವಂತಹ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಅಗ್ನಿಪಥ್ ಯೋಜನೆಯೂ ಸಹ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪೂರಕವಾಗಿದೆ ಎಂದು ಸಮರ್ಥಿಸಿಕೊಂಡರು.
ಮಹೀಂದ್ರ, ಅದಾನಿ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳು ಅಗ್ನಿಪಥ್‍ದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿ ಬಂದವರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಯೋಜನೆ ಅನಿವಾರ್ಯವಾಗಿದೆ. ಸೇನಾ ನೇಮಕಾತಿಗೂ ಸಹ ಇದು ಅನುಕೂಲವಾಗಲಿದೆ ಎಂದರು.
ಪಠ್ಯ ಪರಿಷ್ಕರಣೆಲ್ಲಿ ಕುವೆಂಪು ಅವರಿಗೆ ಅಪಮಾನ ಮಾಡಿಲ್ಲ. ಕುವೆಂಪುರವರ ಬಗ್ಗೆ ಅತ್ಯಂತ ಹೆಚ್ಚು ಪಠ್ಯಗಳನ್ನು ಕೊಟ್ಟಿದ್ದು ನಮ್ಮ ಬಿಜೆಪಿ ಪಕ್ಷ. ಹೀಗಿರುವಾಗ ನಾವು ಅವರಿಗೆ ಅಪಮಾನ ಮಾಡುತ್ತೇವಾ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಸರ್ಕಾರ ಪಠ್ಯದಲ್ಲಿ ಕೆಲ ಬದಲಾವಣೆ ಮಾಡಲು ಒಪ್ಪಿಕೊಂಡಿದೆ ಎಂದರು.
ನೂತನ ಪಠ್ಯಕ್ರಮದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರವನ್ನು ನಾನು ನೋಡಿಲ್ಲ. ಆದರೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ದೇವೇಗೌಡರೊಂದಿಗೆ ಈ ಸಂಬಂಧ ಮಾತನಾಡಲು ಸಿದ್ದರಿದ್ದಾರೆ ಎಂದರು.
ಎಲ್ಲವೂ ರಾಜಕೀಯ ಪ್ರೇರಿತ ಕೆಲಸವಾಗಬಾರದು. ಬೆಳೆಯುವ ಮಕ್ಕಳ ತಲೆ ಹಾಳು ಮಾಡುವ ಕೆಲಸವನ್ನು ನಾವೆಂದೂ ಮಾಡುವುದಿಲ್ಲ. ದೇಶದ ಸಂಸ್ಕೃತಿ, ಸಂಸ್ಕಾರಗಳು ಉಳಿಯಬೇಕು ಎಂಬುದು ನಮ್ಮ ಮೂಲ ಉದ್ದೇಶ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಡಾ. ರಾಜೇಶ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)