ತುಮಕೂರು:


ತುಮಕೂರು ಜಿಲ್ಲೆಯನ್ನು ಗೆದ್ದರೆ, ಇಡೀ ರಾಜ್ಯವನ್ನು ಗೆದ್ದಂತೆ ಎನ್ನುವ ಮಾತಿದೆ,ಇಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ನಗರದ ಡಾ.ಹೆಚ್.ಎಮ್.ಗಂಗಾಧರಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಕಾಂಗ್ರೆಸ್, ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಜಿಲ್ಲೆಯಲ್ಲಿ ಎರಡಂಕಿಯ ಶಾಸಕರನ್ನು ಹೊಂದಬೇಕು, ಬಿಜೆಪಿ, ಜೆಡಿಎಸ್ ಸರಕಾರದ ಆಡಳಿತವನ್ನು ಜಿಲ್ಲೆಯ ಜನರು ನೋಡಿದ್ದಾರೆ, ಸಮರ್ಥ ಆಡಳಿತ ನೀಡಿರುವ ಕಾಂಗ್ರೆಸ್ ಯೋಜನೆ ಬಗ್ಗೆ ಮನೆಮನೆಗೆ ತಿಳಿಸಬೇಕೆಂದರು.
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದ ಕೆಲಸ ಡಬಲ್ ಇಂಜಿನ್ ಸರಕಾರ ಮಾಡುತ್ತಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚಿಂತನಾ ಮಂಥನ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ.ಆದರೆ ರೈತರು ಬೆಳೆದ ಹಣ್ಣು, ತರಕಾರಿ,ಹಾಲಿನ ದರ ಮಾತ್ರ ಏರಿಕೆ ಮಾಡುತ್ತಿಲ್ಲ ಸಾಮಾನ್ಯ ಜನರ ಬದುಕಿನಲ್ಲಿ ತಾರತಮ್ಯ ಇಂತಹ ಶಿಬಿರಗಳಲ್ಲಿ ಚರ್ಚೆ ಯಾಗಬೇಕು,ರಾಜ್ಯಮಟ್ಟದ ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಬಿಟ್ಟು,ಪಕ್ಷದ ಕಾರ್ಯಕರ್ತನನ್ನು ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಂಕಲ್ಪ ಶಿಬಿರ ಚಿಂತನೆ ನಡೆಸಬೇಕೆಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಡೀ ದೇಶದಲ್ಲಿ 78 ಲಕ್ಷ ಕಾರ್ಯಕರ್ತರು ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿರುವುದು ಕರ್ನಾಟಕದಲ್ಲಿ ಮಾತ್ರ, ಸದಸ್ಯತ್ವದ ನೊಂದಣಿಯಿಂದ ಪಕ್ಷ ತಳಮಟ್ಟವನ್ನು ತಲುಪಿದೆ, ಸದಸ್ಯತ್ವ ನೊಂದಣಿಯೊಂದಿಗೆ ಗುರುತಿನ ಪತ್ರ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ಸಂಪರ್ಕ ಸಾಧಿಸಬೇಕು.ಪ್ರತಿ ಬೂತ್ ಮಟ್ಟದಲ್ಲಿ ನೈಜ ಸಮಿತಿಯನ್ನು ರಚಿಸಲಾಗುವುದು,ಪ್ರತಿಯೊಂದು ಗ್ರಾ.ಪಂನಲ್ಲಿ ಕುಳಿತು ಕೆಲಸ ಮಾಡಬೇಕು,ಶಾಸಕರು, ಮಾಜಿ ಶಾಸಕರ ಮನೆಯಲ್ಲಿ ಕುಳಿತು ಕೆಲಸ ಮಾಡುವವರ ಸಮಿತಿಯ ಅವಶ್ಯಕತೆ ಇಲ್ಲ, ಸರಿಯಾಗಿ ಕೆಲಸ ಮಾಡುವವರಿಗೆ ಮಾತ್ರ ಮುಂದೆ ಅಧಿಕಾರ ದೊರಲಿದೆ, ಪಕ್ಷವನ್ನು ಸಶಕ್ತವಾಗಿಸುವ ನಿಟ್ಟಿನಲ್ಲಿ ನಿರಂತರ ಸದಸ್ಯತರವ ನೊಂದಣಿ ನಡೆಯಬೇಕು ಎಂದು ಹೇಳಿದರು.
ಯುವಕರು ಮತ್ತು ಮಹಿಳೆಯರನ್ನು ಪಕ್ಷದ ಕಡೆ ಸೆಳೆಯುವ ನಿಟ್ಟಿ ಹೊಸ ಯೋಜನೆ ರೂಪಿಸಿದ್ದು, ನಿರುದ್ಯೋಗಿಗಳು ಮತ್ತು ಮಹಿಳೆಯರ ಪ್ರತ್ಯೇಕ ಸಮ್ಮೇಳನವನ್ನು ನಡೆಸಬೇಕು ಎಂದ ಅವರು, ಅಗ್ನಿಪಥ್ ಮೂಲಕ ದೇಶದ ಯುವ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ,ಕೊಟ್ಟ ಮಾತಿನಂತೆ ಕೆಲಸ ಮಾಡಲಿಲ್ಲ,ಎರಡು ಕೋಟಿ ಉದ್ಯೋಗ ಕೊಡಲಿಲ್ಲ. ಇವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಶೇ 60ಕ್ಕಿಂತಲೂ ಹೆಚ್ಚು ಯುವಜನರನ್ನು ಹೊಂದಿರುವ ಭವಿಷ್ಯದ ಭಾರತ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸುವ ಉದ್ದೇಶದಿಂದ ನವ ಸಂಕಲ್ಪ ಶಿಬಿರವನ್ನು ಆಯೋಜಿಸಲಾಗಿದೆ.ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಆತ್ಮಾವಲೋಕನ ಶಿಬಿರವೂ ಹೌದು.ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ.ನಮ್ಮಲಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು,ಬಡತನ,ನಿರುದ್ಯೋಗ,ಕೋಮು ದಳ್ಳರಿಯಲ್ಲಿ ಬೆಯುತ್ತಿರುವ ಭಾರತಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಿದೆ. ಇಂದು ಆಡಳಿತದಲ್ಲಿರುವ ಶೇ40ರ ಕಮಿಷನ್ ಸರಕಾರ. ಇಂತಹ ಭ್ರಷ್ಟ ಸರಕಾರವನ್ನು ನಾನೆಂದು ನೋಡಿಲ್ಲ.ಇದನ್ನು ಪ್ರತಿ ಮತದಾರನಿಗೆ ತಿಳಿಸುವ ಪ್ರಯತ್ನ ಪಕ್ಷದ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು.
ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ,ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಐಟಿ ಮತ್ತು ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಭಯದ ವಾತಾವರಣ ನಿರ್ಮಿಸಿದೆ. ಕಾಂಗ್ರೆಸ್ ಪಕ್ಷ ತಳಮಟ್ಟದ ಸಂಘಟನೆ ಹೊಂದಿದ್ದರು, ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಸೋಲಲು ಒಗ್ಗಟ್ಟಿನ ಕೊರತೆಯೇ ಕಾರಣ ಎಂದರು.
ಜಿ.ಪಂ.ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ಜಾತ್ಯಾತೀತವಾದರೂ, ಒಗ್ಗಟ್ಟಿನ ಕೊರತೆ ಇದೆ, ಎಲ್ಲ ಮುಖಂಡರು ಒಟ್ಟಾಗಿ ಪಕ್ಷದ ಪ್ರಚಾರ ಮಾಡಿದರೆ ನಮ್ಮ ಪಕ್ಷ ಸೋಲಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯಬೇಕಿದೆ. ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವೆಂಕಟರಮಣಪ್ಪ, ಮಾಜಿ ಶಾಸಕರಾದ ಷಡಕ್ಷರಿ, ಶಪಿಅಹ್ಮದ್, ಬಿ.ಬಿ.ರಾಮಸ್ವಾಮಿಗೌಡ, ಸಾಸಲು ಸತೀಶ್, ಜಿ.ಜೆ.ರಾಜಣ್ಣ, ಆರ್.ರಾಮಕೃಷ್ಣ, ಕೆಂಚಮಾರಯ್ಯ ಸೇರಿದಂತೆ ಇತರರಿದ್ದರು.

(Visited 1 times, 1 visits today)