ತುಮಕೂರು
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮಹಾತ್ಮಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡುವಲ್ಲಿ ಕರ್ನಾಟಕದಲ್ಲಿ ಬಹು ಹಿಂದಿನಿಂದಲೇ ಪ್ರಯತ್ನಗಳು ನಡೆದಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ರಾಜ್ಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿ ದೇಶದಾದ್ಯಂತ ಮೂರು ಹಂತದ ವಿಕೇಂದ್ರಿಕರಣ ವ್ಯವಸ್ಥೆಯನ್ನು ಭಾರತ ಸರ್ಕಾರ ಶಾಸನಬದ್ದವಾಗಿ ಜಾರಿಗೊಳಿಸಿದ್ದು, ಈ ಕೀರ್ತಿಯು ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದ ಅವರು 1993ರ ಮೇ 10 ರಂದು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ಅಧಿಕೃತವಾಗಿ ಆಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಸಂವಿಧಾನದ 73ನೇ ತಿದ್ದುಪಡಿಯನ್ವಯ 3 ಹಂತದ ಆಡಳಿತ ವ್ಯವಸ್ಥೆಗಳಾದ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಆಸ್ತಿತ್ವಕ್ಕೆ ಬಂದಿದೆ. ಪಂಚಾಯತ್ ವಿಕೇಂದ್ರೀಕರಣದ ಮೂಲ ಉದ್ದೇಶಗಳಾದ ಮಹಿಳೆಯರ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣೆ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ನೈರ್ಮಲ್ಯವನ್ನು ಕಾಪಾಡುವುದಾಗಿದೆ ಎಂದರಲ್ಲದೇ ಈ ಎಲ್ಲಾ ಅವಕಾಶಗಳಿಗೆ ಪಂಚಾಯತ್ ರಾಜ್ ಅಧಿನಿಯಮ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳಿದ್ದು ಯೋಜನೆಗಳನ್ನು ರೂಪಿಸಿ ಅನುμÁ್ಠನಕ್ಕೆ ತರುವ ಹೊಣೆಗಾರಿಕೆ ಸ್ಥಳೀಯ ಸರ್ಕಾರಗಳಿಗಿದೆ ಎಂದು ತಿಳಿಸಿದರು.
ಕಳೆದ 29 ವರ್ಷಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅಮೂಲಾಗ್ರವಾದ ಕ್ರಾಂತಿಕಾರಕವಾದ ಸುಧಾರಣೆಗಳನ್ನು ತರಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೊಳಿಸುವಲ್ಲಿಯೂ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ದಿಶೆಯಲ್ಲಿ ಪಾರದರ್ಶಕತೆಗೆ, ಉತ್ತರದಾಯಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಶಾಖಾ ಮುಖ್ಯಸ್ಥರಾದ ಉಪಕಾರ್ಯದರ್ಶಿ (ಅಭಿವೃದ್ಧಿ) ಅಥಿಕ್ ಪಾಷ, ಉಪಕಾರ್ಯದರ್ಶಿ (ಆಡಳಿತ) ಕೃಷ್ಣಮೂರ್ತಿ, ಯೋಜನಾ ನಿರ್ದೇಶಕರಾದ ನರಸಿಂಹಮೂರ್ತಿ, ಯೋಜನಾಧಿಕಾರಿಗಳಾದ ಸಣ್ಣಮಸಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಪಾಲಕ ಅಭಿಯಂತರ ಶ್ರೀನಾಥ್ ಸೇರಿದಂತೆ ಜಿಲ್ಲಾ ಪಂಚಾಯತಿ ನೌಕರರು/ಸಿಬ್ಬಂದಿ ಹಾಜರಿದ್ದರು.

(Visited 9 times, 1 visits today)