ತುಮಕೂರು:
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ, ರಾಜ್ಯ ಸರಕಾರದ ರೈತವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮೇ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಜನಚಳವಳಿ ಕೇಂದ್ರದಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು,ಸೇವಾ ಕ್ಷೇತ್ರವಾಗಿದ್ದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಇದುವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದ ರೈತರ ಪಂಪ್‍ಸೆಟ್‍ಗಳಿಗೆ,ಭಾಗ್ಯ ಜೋತಿ,ಕುಟೀರ ಜೋತಿ ಯೋಜನೆಗಳ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆದಿದೆ.ಇದನ್ನು ಎಲ್ಲಾ ರೈತರು, ಬಡವರು ವಿರೋಧಿಸಬೇಕಿದೆ. ಈ ಹಿನ್ನೇಲೆಯಲ್ಲಿ ಮೇ.16ರ ಬೃಹತ್ ಹೋರಾಟವನ್ನು ರೂಪಿಸಲಾಗಿದೆ ಎಂದರು.
ರಾಜ್ಯ ಸರಕಾರ ರೈತರಿಗೆ ಪ್ರತಿದಿನ ಏಳು ಗಂಟೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ಇದು ಸುಳ್ಳು,ದಿನವೊಂದಕ್ಕೆ 2-3 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ.ಟಿ.ಸಿ ಸುಟ್ಟು ಹೋದರೆ 24 ಗಂಟೆಗಳಲ್ಲಿ ಬದಲಿಸಿಕೊಡಬೇಕೆಂಬ ನಿಯಮವಿದ್ದರೂ 15-20 ದಿನಗಳ ಕಾಲ ಕಾಯಬೇಕು,ಅಕ್ರಮ ಸಕ್ರಮದಲ್ಲಿ ಹಣಕಟ್ಟಿದ ಸುಮಾರು 13296 ಮಂದಿಗೆ 7 ವರ್ಷ ಕಳೆದರೂ ವಿದ್ಯುತ್ ಸಂಪರ್ಕ ನೀಡಿಲ್ಲ.ತಾತ್ಕಾಲ ಯೋಜನೆಯಡಿ ಹಣ ಕಟ್ಟಿರುವ 319 ಜನ ರೈತರಿಗೆ ಟ್ರಾನ್ಸ್‍ಫಾರ್ಮರ್ ನೀಡಿಲ್ಲ.ಇದರಿಂದ ವಿದ್ಯುತ್ ನಂಬಿ ಬೆಳೆ ಬೆಳೆದಿದ್ದ ರೈತರು ಬೆಳೆ ಕಳೆದುಕೊಂಡು ಪರಿತಪಿಸುವಂತಾಗಿದೆ ಎಂದು ಎ.ಗೋವಿಂದರಾಜ ದೂರಿದರು.
ಇಂದು ರೈತರು ಬೆಲೆ ಹೆಚ್ಚಳದಿಂದ ಬದುಕುವುದೇ ಕಷ್ಟವಾಗಿದೆ.ಡಿಸೇಲ್,ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಪೈಪ್‍ಗಳ ಬೆಲೆ ಹೆಚ್ಚಳದಿಂದ ಕೃಷಿಗೆ ಹೂಡುವ ಬಂಡವಾಳ ಹೆಚ್ಚಾಗಿ,ಕೃಷಿಯಿಂದ ಹಿಂದೆ ಸರಿಯುವ ಸ್ಥಿತಿ ನಿರ್ಮಾಣವಾಗಿದೆ.ಆದರೆ ಕಳೆದ 10 ವರ್ಷಗಳಲ್ಲಿ ಇದ್ದ ಬೆಲೆಯೇ ಇಂದಿಗೂ ಕೃಷಿ ಉತ್ಪನ್ನಗಳಿಗೆ ಮುಂದುವರೆದಿದೆ.ಬೆಂಬಲ ಬೆಲೆ ಮೂಲಕ ನೆರವಿಗೆ ಬರಬೇಕಾದ ಸರಕಾರ ಹಿಜಾಬ್, ಹಲಾಲ್‍ಕಟ್ ಹೆಸರಿನಲ್ಲಿ ಜನರ ನಡುವೆ ಜಾತಿ ವೈಷಮ್ಯ ಬಿತ್ತಿ, ಜನರ ಮನಸ್ಸನ್ನು ಬೇರೆಡೆಗೆ ಸೆಳೆದಿದೆ.
ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಾದ ಭದ್ರಾಮೇಲ್ಮಂಡೆ, ಎತ್ತಿನಹೊಳೆ, ಬಿಕ್ಕಗುಡ್ಡ ಮತ್ತು ಹಾಗಲವಾಡಿ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಲ್ಲದೆ ಕೊರಟಗೆರೆಯ ಬಳಿ ನಿರ್ಮಾಣವಾಗಬೇಕಿದ್ದ ಭಪ್ಹರ್ ಡ್ಯಾಂ ನಿರ್ಮಾಣವನ್ನು ಬದಲಾಯಿಸಲು ಹೊರಟಿದ್ದು, ಕೂಡಲೇ ಕೈಬಿಡಬೇಕು, ಕೊರಟಗೆರೆ ಭಾಗದ ರೈತರಿಗೂ ಸೂಕ್ತ ಪರಿಹಾರ ನೀಡಿ, ಭೂಮಿಯನ್ನು ವಶಕ್ಕೆ ಪಡೆದು ಅಲ್ಲಿಯೇ ಡ್ಯಾಂ ನಿರ್ಮಾಣ ಮಾಡಬೇಕೆಂದು ಎ.ಗೋವಿಂದರಾಜು ಸರಕಾರವನ್ನು ಒತ್ತಾಯಿಸಿದರು.
ವಿದ್ಯುತ್ ಖಾಸಗೀಕರಣ ಕೈಬಿಡಬೇಕು,ರೈತರಿಗೆ ಮಾರಕವಾದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಪ್ರಮುಖ ಬೇಡಿಕೆಗಳ ಜೊತೆಗೆ, ವಿವಿಧ ಬೇಡಿಕೆಗಳನ್ನು ಒಳಗೊಂಡಂತೆ ಈ ಹೋರಾಟ ನಡೆಯುತ್ತಿದೆ. ಮೇ.16 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮೊದಲು ಟೌನ್‍ಹಾಲ್‍ನಲ್ಲಿ ರೈತರು ಸಮಾವೇಶಗೊಂಡು, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕೇರಿ ತಲುಪಿ,ಒತ್ತಾಯಪೂರ್ವಕ ಮನವಿ ಸಲ್ಲಿಸಲಿದ್ದು,ಅಲಿಂದ ಬೆಸ್ಕಾಂ ಕಚೇರಿಗೆ ತೆರಳಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಪ್ರತಿಭಟನೆಯಲ್ಲಿ ರೈತರ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ,ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ,ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ,ರಾಜ್ಯ ಕಾರ್ಯಾಧ್ಯಕ್ಷ ಎ.ಗೋವಿಂದರಾಜು ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿಂದು ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಸಿ.ಶಂಕರಪ್ಪ, ಸಂಘಟನಾ ಕಾರ್ಯದರ್ಶಿ ರವೀಶ್,ಸಿ.ಜಿ.ಲೋಕೇಶ್,ಶಬ್ಬೀರ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 5 times, 1 visits today)