ತುಮಕೂರು:

      ರೈತಸಿರಿ, ಕೃಷಿಭಾಗ್ಯ, ಪಿಎಂಕಿಸಾನ್, ಬೆಳೆ ವಿಮಾ, ಗಂಗಾ ಕಲ್ಯಾಣ ಸೇರಿದಂತೆ ಎಲ್ಲಾ ಕೃಷಿ ಯೋಜನೆಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಾ ಮಾತನಾಡಿದ ಅವರು, ರೈತರಿಗಾಗಿ ಜಾರಿಯಲ್ಲಿರುವ ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಮಳೆ ಬಾರದೆ ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಯೋಜನೆಗಳಿಂದಾದರೂ ರೈತರು ಕೊಂಚ ಸುಧಾರಿಸಿಕೊಳ್ಳಲಿ ಎಂದು ತಿಳಿಸಿದ ಅವರು, ಬಾಕಿ ಇರುವ ಬೆಳೆ ವಿಮಾ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕೆಂದು ಸೂಚಿಸಿದರು.

      ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ.9ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಸುಮಾರು 40 ಹೋಬಳಿಗಳಲ್ಲಿ ವಾಡಿಕೆ ಮಳೆ ಬಾರದೆ ಮುಸುಕಿನಜೋಳ, ನೆಲಗಡಲೆ ಬೀಜ ಬಿತ್ತನೆ ಕಾರ್ಯದಲ್ಲಿ ಹಿನ್ನಡೆಯಾಗಿದೆ. ಜುಲೈ ತಿಂಗಳಾಂತ್ಯದೊಳಗೆ ಮಳೆಯಾದರೆ ರಾಗಿ ಬಿತ್ತನೆ ಕಾರ್ಯ ಚುರುಕಾಗಲಿದೆ ಎಂದು ತಿಳಿಸಿದ ಅವರು, ಪಿಎಂಕಿಸಾನ್ ಯೋಜನೆಯಡಿ ಅರ್ಹ ರೈತರು ನೋಂದಾಯಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಜುಲೈ 22ರವರೆಗೆ ಕಾಲಾವಕಾಶವಿದೆ. ಅಲ್ಲದೆ ರೈತರು ಖುದ್ದು ತಾವೇ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಭೆಗೆ ಮಾಹಿತಿ ನಿಡಿದರು. ಸರ್ಕಾರವು ಸಿರಿಧಾನ್ಯ ಬೆಳೆಯಲಿಚ್ಛಿಸುವ ರೈತರನ್ನು ಪ್ರೋತ್ಸಾಹಿಸಲು ರೈತ ಸಿರಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕನಿಷ್ಠ 1 ರಿಂದ ಗರಿಷ್ಟ 2 ಎಕರೆ ಜಮೀನಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 10ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

      ಬೆಳೆ ವಿಮಾ ಕಂತು ಕಟ್ಟಲು ಜುಲೈ ತಿಂಗಳ 31ರವರೆಗೆ ಕಾಲಾವಕಾಶವಿದ್ದು, ಅರ್ಹ ರೈತರು ನಿಗಧಿತ ಅವಧಿಯೊಳಗೆ ವಿಮಾ ಹಣ ಕಟ್ಟಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 9569 ರೈತ ಬೆಳೆ ವಿಮಾ ಅರ್ಜಿಗಳು ಬ್ಯಾಂಕಿನಿಂದ ತಿರಸ್ಕøತವಾಗಿದ್ದು, ಇದರಲ್ಲಿ ಅನರ್ಹ ಅರ್ಜಿಗಳನ್ನು ಹೊರತುಪಡಿಸಿ ಉಳಿದ 7957 ಅರ್ಹ ಅರ್ಜಿದಾರರಿಗೆ ಬ್ಯಾಂಕಿನವರು ವಿಮಾ ಹಣ ಪಾವತಿಸಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ರೈತರು 25ಹೆಚ್‍ಪಿಗಿಂತ ಕಡಿಮೆ ಸಾಮಥ್ರ್ಯ ಹೊಂದಿರುವ ಟ್ರ್ಯಾಕ್ಟರ್ ಖರೀದಿಸಲು ಸಾಮಾನ್ಯ ವರ್ಗದವರಿಗೆ 25ಸಾವಿರ ರೂ.ಗಳ ಹಾಗೂ ಪ.ಜಾತಿ/ಪ.ಪಂಗಡದ ರೈತರಿಗೆ 2ಲಕ್ಷ ರೂ.ಗಳವರೆಗೆ ಸಹಾಯಧನ ಒದಗಿಸಲಾಗುವುದು. ರೈತ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲಾದ್ಯಂತ ಬೀದಿನಾಟಕಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

      ಲೀಡ್ ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್ ಮಾತನಾಡಿ, ಬೆಳೆ ವಿಮಾ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಸಭೆಯಲ್ಲಿ ಚರ್ಚೆಯಾಗಿದ್ದು, ಈ ತಿಂಗಳಲ್ಲೇ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.

      ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾಹಿತಿ ಕೇಳಿದಾಗ ಉತ್ತರಿಸಿದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಪ್ರಕಾಶ್ ಜಿಲ್ಲೆಗೆ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಬಹುಗ್ರಾಮ ಯೋಜನೆಯಡಿ 115.49ಕೋಟಿ ರೂ. ಹಣ ಮಂಜೂರಾಗಿದ್ದು, ಈ ಪೈಕಿ 295 ಕೋಟಿ ರೂ. ಖರ್ಚು ಮಾಡಿ ತಿಪಟೂರು, ತುಮಕೂರು ಹಾಗೂ ಪಾವಗಡ ತಾಲೂಕುಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಉಳಿದಿರುವ 49ಕೋಟಿ ರೂ. ಹಣದೊಂದಿಗೆ ಪ್ರಸಕ್ತ ಸಾಲಿನಲ್ಲಿ 36.79ಕೋಟಿ ರೂ. ಹೊಸದಾಗಿ ಬಿಡುಗಡೆಯಾಗಿದೆ. ಜಿಲ್ಲೆಯ ತುಮಕೂರು, ಶಿರಾ, ಮಧುಗಿರಿ, ಪಾವಗಡ, ಕೊರಟಗೆರೆ ತಾಲ್ಲೂಕಿನಲ್ಲಿ ಹೆಚ್ಚಿನ ನೀರಿನ ಸಮಸ್ಯೆ ತಲೆದೋರಿದ್ದು, ಈ ಪ್ರದೇಶದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಸಲ್ಲಿಸಿರುವ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಪ್ರಸ್ತುತ ಕುಡಿಯುವ ನೀರಿಗೆ ತೊಂದರೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

      ತೋಟಗಾರಿಕೆ ಉಪನಿರ್ದೇಶಕ ರಘು ಮಾತನಾಡಿ, ಇಲಾಖೆಯಿಂದ ಕೃಷಿಯಲ್ಲಿ ಹಿಂದುಳಿದ ರೈತರನ್ನು ಹೋಬಳಿ ಮಟ್ಟದಲ್ಲಿ ಪ್ರಗತಿಪರ ರೈತರ ಜಮೀನಿಗೆ ಕರೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಹೆಬ್ಬೂರಿನ 133 ಎಕರೆ ಪ್ರದೇಶದಲ್ಲಿ ಕ್ಲಸ್ಟರ್ ಆಧಾರದಲ್ಲಿ 150 ಬಾಳೆ ಬೆಳೆಯುವ ರೈತರಿಗೆ ಸೌಲಭ್ಯ ಕಲ್ಪಿಸಿದ್ದು, ಇದರಿಂದ ಒಟ್ಟಾರೆ ವಾರ್ಷಿಕ 9 ಕೋಟಿ ರೂ. ಆದಾಯ ಬರುತ್ತಿದೆ ಎಂದು ತಿಳಿಸಿದರು.

      ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಮೂರ್ತಿ ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲಿಸಿ ಪಾಲಿಹೌಸ್ ಯೋಜನೆಯ ಸೌಲಭ್ಯವನ್ನು ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಸೂಕ್ತ ತಿಳುವಳಿಕೆ ನೀಡುತ್ತಿಲ್ಲವೆಂದು ಆರೋಪಿಸಿದರು. ನೈಜ ರೈತರಿಗೆ ಈ ಯೋಜನೆಯ ಲಾಭ ತಲುಪುತ್ತಿಲ್ಲ. ಪಾಲಿಹೌಸ್ ಯೋಜನೆಯಡಿ ದೊರೆಯುವ ಸಹಾಯಧನವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಶಿಸ್ತುಕ್ರಮ ಕೈಗೊಳ್ಳುವ ನಿಯಮ ಜಾರಿಗೆ ತರಬೇಕೆಂದು ತಿಳಿಸಿದರು.

      ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮಾತನಾಡಿ, ಜಿಲ್ಲೆಯ 6 ತಾಲ್ಲೂಕುಗಳ 29 ಹೋಬಳಿಗಳಲ್ಲಿ ಕಂದಾಯ ಹಾಗೂ ಪಶುವೈದ್ಯ ಇಲಾಖೆಗಳು ಜಂಟಿಯಾಗಿ ಜಾನುವಾರುಗಳ ಮೇವು ಬ್ಯಾಂಕುಗಳನ್ನು ತೆರೆಯಲಾಗಿದೆ.

      ಎಲ್ಲಾ ಮೇವು ಬ್ಯಾಂಕುಗಳಲ್ಲಿ ಗುಣಮಟ್ಟದ ಮೇವನ್ನು ಸರಬರಾಜು ಮಾಡಲಾಗುತ್ತಿದೆ. ಕಳಪೆ ಗುಣಮಟ್ಟದ ಸುಮಾರು 120ಟನ್ ಮೇವನ್ನು ಖರೀದಿಸದೆ ತಿರಸ್ಕರಿಸಲಾಗಿದೆ. ಶಿರಾ ತಾಲ್ಲೂಕಿನಲ್ಲಿ ಮಾತ್ರ ಗುತ್ತಿಗೆದಾರರು ಗುಣಮಟ್ಟದ ಮೇವು ಸರಬರಾಜು ಮಾಡದೇ ಇದ್ದುದರಿಂದ ಮೇವು ಬ್ಯಾಂಕನ್ನು ಸ್ಥಗಿತಗೊಳಿಸಲಾಗಿತ್ತು. ಇವರ ಟೆಂಡರನ್ನು ರದ್ದುಪಡಿಸಿ, 5ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡು ಹೊಸ ಟೆಂಡರು ಕರೆದು ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಮಳೆಯಾಗಿದೆ ಎನ್ನುವ ಕಾರಣಕ್ಕೆ ತಿಪಟೂರಿನಲ್ಲಿಯೂ ತಾತ್ಕಾಲಿಕವಾಗಿ ಮೇವು ಬ್ಯಾಂಕ್ ನಿಲ್ಲಿಸಲಾಗಿತ್ತು. ಕೋರ್ಟ್ ಆದೇಶ ಇರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇಲೆ ಮತ್ತೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.

      ಮೇವು ಬ್ಯಾಂಕಿನಲ್ಲಿ ಮಾರ್ಚ್ 3ರಿಂದ ಈವರೆಗೂ ಗುತ್ತಿಗೆದಾರರದಿಂದ 17ಸಾವಿರ ಮೆ.ಟನ್ ಮೇವು ಖರೀದಿ ಮಾಡಿದ್ದು, 16029 ಮೆ.ಟನ್ ರೈತರಿಗೆ ವಿತರಣೆ ಮಾಡಲಾಗಿದೆ. ಈವರೆಗೂ ಒಟ್ಟು 275233 ಜಾನುವಾರುಗಳಿಗೆ ಮೇವು ವಿತರಣೆ ಮಾಡಿದ್ದು, 16.86ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರತಿ ಕೆ.ಜಿ. ಮೇವಿಗೆ 2 ರೂ.ನಂತೆ ಒಮ್ಮೆಗೆ 15 ದಿನಗಳಿಗಾಗುವಷ್ಟು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ಜಾನುವಾರಿಗೆ ಒಣಹುಲ್ಲಾದರೆ 5 ಕೆ.ಜಿ., ಹಸಿಹುಲ್ಲಾದರೆ 15 ಕೆ.ಜಿಯಂತೆ ವಿತರಣೆ ಮಾಡಲಾಗುತ್ತಿದೆ ಎಂದರಲ್ಲದೆ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಕಾಲುಬಾಯಿ ರೋಗದ ವರದಿಯಾಗಿಲ್ಲ ಎಂದು ತಿಳಿಸಿದರು.

      ತುಮಕೂರು ತಾಲೂಕಿನಲ್ಲಿ ಮೇವು ಬ್ಯಾಂಕ್ ಯಾಕೆ ತೆರೆದಿಲ್ಲವೆಂಬ ಉಪಾಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ತುಮಕೂರಿನಲ್ಲಿ ಮೇವಿನ ಸಮಸ್ಯೆ ಇಲ್ಲದಿರುವುದರಿಂದ ಮೇವು ಬ್ಯಾಂಕ್ ತೆರೆದಿಲ್ಲ. ಆದರೆ ಕೋರಾ ಹೋಬಳಿಯಲ್ಲಿ ಮೇವು ಕೊರತೆಯಾಗಿರುವುದರಿಂದ ಇಲ್ಲಿ ಮೇವು ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದೆ ಎಂದರು.

      ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸಿದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷೆ ಡಾ: ನವ್ಯಬಾಬು ಅವರು ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ವಿದ್ಯಾರ್ಥಿಗಳಿಗೆ 8ನೇ ತರಗತಿಯಿಂದಲೇ ವಿಶೇಷ ತರಗತಿ ನಡೆಸಬೇಕು.

      ಉತ್ತಮ ಫಲಿತಾಂಶ ಬಾರದ ಅನುದಾನಿತ ಶಾಲೆಗಳಿಗೆ ನೋಟೀಸ್ ಜಾರಿ ಮಾಡಬೇಕೆಂದು ಸೂಚನೆ ನೀಡಿದರಲ್ಲದೆ ಪ್ರಾಥಮಿಕ ಶಾಲೆಗಳಲ್ಲಿ ಗುಮಾಸ್ತರು ಹಾಗೂ ಗ್ರೂಪ್ ಡಿ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆ ನೀಡಿದರು.

      ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಬೆಳಗುಂಬ ಗ್ರಾ.ಪಂ. ಯಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ರಸ್ತೆಯಲ್ಲಿ ಕುಳಿತು ಪಾಠ ಕಲಿಯುತ್ತಿದ್ದಾರೆ. ಸೂಕ್ತ ಕ್ರಮ ಏಕೆ ಕೈಗೊಂಡಿಲ್ಲವೆಂದು ಡಿಡಿಪಿಐ ಕಾಮಾಕ್ಷಿ ಅವರನ್ನು ತರಾಟೆಗೆ ತೆಗೆದುಕೊಂಡಾಗ ಸ್ಥಳೀಯರಿಂದ ನಿವೇಶನದ ತಕರಾರು ಇರುವುದರಿಂದ ಹೊಸ ಶಾಲಾ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಕಾಮಾಕ್ಷಿ ಉಪಾಧ್ಯಕ್ಷರ ಗಮನಕ್ಕೆ ತಂದರು.

      ನಿಗಮಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸಮಿತಿ ಅನುಮತಿ ಪಡೆಯುವ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ, ಜನನಿ ಸುರಕ್ಷಾ ಯೋಜನೆ, ಹೇಮಾವತಿ ನಾಲೆ ಸೇರಿದಂತೆ ಅರಣ್ಯ, ರೇಷ್ಮೆ, ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಸಿಇಓ ಶುಭಾ ಕಲ್ಯಾಣ್, ಉಪಸ್ಥಿತರಿದ್ದರು.

(Visited 103 times, 1 visits today)