ತುಮಕೂರು:

       ಚುನಾಯಿತ ಪ್ರತಿನಿಧಿ ಯೊಬ್ಬರಿಗೆ ಕಂದಾಯಾಧಿಕಾರಿ ಅವರ ಸದಸ್ಯ ಸ್ಥಾನದ ಅಧಿಕಾರವನ್ನೇ ಸೂಪರ್ ಸೀಡ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

     ಸಾಮಾನ್ಯವಾಗಿ ಕಂದಾಯಾಧಿಕಾರಿ ಹುದ್ದೆಯಲ್ಲಿರುವ ಜಗದೀಶ್‍ರವರು ಮೂಲತಃ ಕಂದಾಯಾಧಿಕಾರಿಯ ಹುದ್ದೆಯವರಲ್ಲ. ವ್ಯವಸ್ಥಾಪಕರ ಬಡ್ತಿ ಪಡೆದ ನಂತರ ಕಂದಾಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ವ್ಯಾಪ್ತಿ ಮೀರಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ಬೆದರಿಸಿ ಕಿರುಕುಳ ನೀಡುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು. ಕಾನೂನು ನಿಯಮಾನುಸಾರ ಆಗಬೇಕಿದ್ದ ಕೆಲಸಗಳಿಗೆ ಹಲವು ಕಾನೂನಿನ ತೊಡಕಿನ ನೆಪವೊಡ್ಡಿ ಹಣಕ್ಕಾಗಿ ಸರ್ಕಾರಿ ಕೆಲಸಗಳನ್ನು ವಿಳಂಬ ಮಾಡಿ ಹಣವನ್ನು ಪಡೆಯುತ್ತಿದ್ದರು ಎಂಬ ಆಪಾದನೆ ಹೆಚ್ಚಾಗಿತ್ತು. ಆದರೆ ತಾನು ಎಲ್ಲಾ ತಿಳಿದಿದ್ದೇನೆ ಎಂಬ ಮೇದಾವಿತನದಿಂದ ಸಾಮಾನ್ಯ ರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಈತ ಇದೀಗ ಪಾಲಿಕೆಯ ಸದಸ್ಯರೊಂದಿಗೆ ಅದೇ ರೀತಿ ಧರ್ಪ ತೋರಿ ಸಿಲುಕಿ ಹಾಕಿಕೊಂಡಿದ್ದಾರೆ.

      ತುಮಕೂರು ಮಹಾನಗರಪಾಲಿಕೆಯಲ್ಲಿ ಕಂದಾಯಾಧಿಕಾರಿ ಕಾರ್ಪೋರೇಟ್ ಒಬ್ಬರಿಗೆ ನಿಮ್ಮ ಅಧಿಕಾರವನ್ನು ಸೂಪರ್‍ಸೀಡ್ ಮಾಡುತ್ತೇನೆ ಎಂದು ಬೆದರಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ನಿನ್ನೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

       ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಂದಾಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ಆಡಿದ್ದೇ ಆಟವಾಗಿದೆ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಆರ್‍ಓ ಜಗದೀಶ್ ಉಪಟಳ ಯಾವ ಮಟ್ಟಕ್ಕಾಗಿದೆ ಅಂದರೆ ಬರೊಬ್ಬರಿ ಮೂರು ಬಾರಿ ಗೆಲ್ಲುತ್ತಾ ಬಂದಿರೋ ಕಾರ್ಪೋರೇಟರ್ ಒಬ್ಬರಿಗೆ ನಿಮ್ಮ ಅಧಿಕಾರವನ್ನೆಲ್ಲಾ ಸೂಪರ್ ಸೀಡ್ ಮಾಡ್ತೇನೆ ಅಂತ ಹೆದರಿಸಿದ್ದಾರೆ ಎನ್ನಲಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಯಾರೂ ಕೇಳದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಇವತ್ತು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.

      ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್‍ಗಳ ಜನರು ತಮ್ಮ ಜಮೀನು, ಮನೆ, ಹೊಟೇಲ್, ಮಳಿಗೆ ಇತ್ಯಾದಿ ಆಸ್ತಿಗಳಿಗೆ ಶೇ.15 ರಷ್ಟು ತೆರಿಗೆಯನ್ನ ಕಟ್ಟಬೇಕು ಅಂತ ಕೊರೊನಾ ಸಂಕಷ್ಟದ ಸಮಯದಲ್ಲೂ ಪಾಲಿಕೆಯ ಆರ್‍ಒಜಗದೀಶ್ ಜನರನ್ನ ಪೀಡುಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಕೌನ್ಸಿಲ್ ಒಬ್ಬರಿಗೆ ಇದು ಸರ್ಕಾರದ ಆದೇಶ, ಇದನ್ನ ಉಲ್ಲಂಗಿಸಿದರೆ ನಿಮ್ಮ ಅಧಿಕಾರವನ್ನ ಸೂಪರ್ ಸೀಡ್ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಸದಸ್ಯ ನಯಾಝ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.

      ಇತ್ತೀಚೆಗೆ ನಡೆದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಭೀತಿಯ ನಡುವೆ ತೆರಿಗೆ ಹೆಚ್ಚಳ ಮಾಡಬಾರದು. ಇದರಿಂದ ಸಾರ್ವಜನಿಕರ ಮೇಲೆ ಸಾಕಷ್ಟು ಒತ್ತಡ ಬೀಳಲಿದೆ ಎಂದು ಸರ್ಕಾರವೇ ಹೇಳಿದೆ. ಆದರೆ, ಇದಕ್ಕೆ ಪಾಲಿಕೆಯ ಅಧಿಕಾರಿ ತೆರಿಗೆ ಹೆಚ್ಚಳ ಮಾಡಲು ಸದಸ್ಯರು ಒಪ್ಪದಿದ್ದರೆ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿದೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.

      ಪಾಲಿಕೆ ಆರ್‍ಒ ಜಗದೀಶ್ ಹೀಗೆಲ್ಲಾ ಕೌನ್ಸಿಲರ್‍ಗಳಿಗೆ ಅವಾಜ್ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ಅಧಿಕಾರಿ ಜಗದೀಶ್ ಪಾಲಿಕೆ ಮೇಯರ್ ಬಳಿ ತೆರಳಿ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಕಿವಿಗೊಡದ ಮೇಯರ್ ಫರೀದಾ ಬೇಗಂ ಅವರು ಸೂಪರ್ ಸೀಡ್ ಕುರಿತು ವಿಷಯವನ್ನು ಹಬ್ಬಿಸುತ್ತಿರುವ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಕುರಿತು ಮುಂದಿನ ಸಭೆಯಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು. ಒಟ್ಟಾರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಆರ್‍ಒ ಜಗದೀಶ್ ಎಂಬ ಅಧಿಕಾರಿಯದ್ದೇ ಆಡಳಿತ ಶುರುವಾಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಯಿತು. ಜಗದೀಶ್ ವೇಗಕ್ಕೆ ಕಡಿವಾಣ ಹಾಕಬೇಕಿದ್ದ ಪಾಲಿಕೆ ಮೇಯರ್ ಹಾಗೂ ಆಯುಕ್ತರು ದಿವ್ಯ ಮೌನ ವಹಿಸಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಪಾಲಿಕೆ ಈಗಲೇ ಎಚ್ಚೆತ್ತು ಹೀಗೆಲ್ಲಾ ಹೆದರಿಸಿಕೊಂಡು ಓಡಾಡುತ್ತಿರುವ ಅಧಿಕಾರಿ ಜಗದಿಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

(Visited 1,496 times, 1 visits today)