ತುಮಕೂರು:

      ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಉಪಯುಕ್ತವಾಗುವಂತಹ ತಂತ್ರಜ್ಞಾನದ ನೆರವನ್ನು ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀಡುತ್ತಿರುವುದು ಉತ್ತಮ ಬೆಳವಣಿಗೆ, ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು.

      ನಗರದ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯಲ್ಲಿ ಸ್ವಾದ ಫೌಂಡೇಶನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದ ಅವರು, ಹಳ್ಳಿ ಪ್ರದೇಶ ಮಕ್ಕಳು ಹಾಗೂ ನಗರ ಪ್ರದೇಶದ ಮಕ್ಕಳ ನಡುವಿನ ತಂತ್ರಜ್ಞಾನದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮವನ್ನು ರೂಪಿಸಿದ್ದು, ಆನ್‍ಲೈನ್ ಕೋಚಿಂಗ್ ಸೇರಿದಂತೆ ಎಲ್ಲರಿಗೂ ಮಾಹಿತಿ ಮುಕ್ತವಾಗಿ ದೊರಕುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಮಕ್ಕಳು ಟ್ಯಾಬ್ಲೆಟ್ ಅನ್ನು ಮನರಂಜನೆಗೆ ಬಳಸದೇ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಳಸಬೇಕು ಎಂದು ಹೇಳಿದರು.

       ಕೋವಿಡ್-19 ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನಿಲ್ಲಬಾರದು ಎನ್ನುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸಿ ಸ್ವಾದ ಫೌಂಡೇಶನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ಮಕ್ಕಳಿಗೆ ಕೆರಿಯರ್ ಡೆವಲ್‍ಮೆಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಅವಶ್ಯಕವಾಗಿದ್ದು, ಸಾಂಕ್ರಾಮಿಕ ಕೋವಿಡ್ ನಡುವೆಯೂ ಮಕ್ಕಳಿಗೆ ಶಿಕ್ಷಣ ಅವಶ್ಯಕವಾಗಿದೆ ಎಂದು ತಿಳಿಸಿದರು.

      ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ನಾಗಣ್ಣ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, 1500 ಅರ್ಜಿಗಳಲ್ಲಿ 30 ವಿದ್ಯಾರ್ಥಿಗಳನ್ನು ಸ್ವಾದ ಫೌಂಡೇಶನ್ ಮತ್ತು ದೀಕ್ಷಾ ಸಂಸ್ಥೆ ಹಮ್ಮಿಕೊಂಡಿದ್ದು, ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಉತ್ತಮ ಶಿಕ್ಷಕರು ಮುಖ್ಯ, ವಿದ್ಯಾರ್ಥಿಗಳು ಸಿಗುವ ಶಿಕ್ಷಣ ಬಳಸಿಕೊಂಡು ಜ್ಞಾನಾರ್ಜನೆ ಹೆಚ್ಚಿಕೊಂಡರೆ, ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

      ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ತಮ್ಮ ಕುಟುಂಬದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು, ಪೋಷಕರ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮಕ್ಕಳು ಶ್ರಮವಹಿಸಬೇಕು ಎಂದು ಕರೆ ನೀಡಿದ ಅವರು, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಗಳು ನಡೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗುವ ಮೂಲಕ ಉತ್ತಮ ಸ್ಥಾನವನ್ನು ಪಡೆಯಬೇಕು ಎಂದು ಹೇಳಿದರು.

      ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಫೌಂಡೇಶನ್ ಶ್ರಮಿಸುತ್ತಿದ್ದು, ಸ್ವಾದ ಫೌಂಡೇಶನ್‍ನ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡುವ ಮೂಲಕ ಅವರಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

      ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅವರಿಗೆ ಉತ್ತಮ ಅವಕಾಶ ಕಲ್ಪಿಸುವುದು ಸ್ವಾದ ಫೌಂಡೇಶನ್ ಉದ್ದೇಶವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ 210 ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣಕ್ಕೆ ಅಗತ್ಯವಾಗಿರುವ ಟ್ಯಾಬ್ಲೆಟ್‍ಗಳನ್ನು ಉಚಿತವಾಗಿ ನೀಡಲಾಗಿದ್ದು, ಜಿಲ್ಲೆಯ 1200 ವಿದ್ಯಾರ್ಥಿಗಳಲ್ಲಿ ಅರ್ಹ 30 ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪದವಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

     ದೀಕ್ಷಾ ಸಂಸ್ಥೆಯ ರಾಕ್‍ಲೈನ್‍ ರವಿಕುಮಾರ್ ಮಾತನಾಡಿ ಸಮಾಜದಲ್ಲಿ ಹೋರಾಡುವ ಮನಸ್ಥಿತಿ ಇಲ್ಲ ಇಂತಹ ಸಂದರ್ಭದಲ್ಲಿ ಸ್ವಾದ ಫೌಂಡೇಶನ್ ಸರ್ಕಾರದ ಸೌಲಭ್ಯ ಪಡೆಯದೇ ದೇಶಕ್ಕೆ ಸೇವೆ ನೀಡುವುದಕ್ಕಾಗಿ ಎಸ್ಸೆಸ್ಸೆಲ್ಸಿ ನಂತರ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಕೊಡಿಸುವ ಮೂಲ ಉದ್ಯೋಗಕೊಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದ ಅವರು, ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ದೀಕ್ಷಾ ಸಂಸ್ಥೆಯ ಮೂಲಕ ತರಬೇತಿ ನೀಡಲು ಮುಂದಾಗಿದೆ ಎಂದರು.

     ಕೋವಿಡ್-19 ಸಂದರ್ಭದಲ್ಲಿ ಸ್ವಾದ ಫೌಂಡೇಶನ್ ನೀಡುವ ತಂತ್ರಜ್ಞಾನದ ನೆರವನ್ನು ಪಡೆದುಕೊಂಡು ಉಚಿತ ಪ್ರವೇಶಾತಿ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕು ಎಂದ ಅವರು, ಸ್ವಾದ ಫೌಂಡೇಶನ್ ವಿದ್ಯಾರ್ಥಿಗಳ ಮೇಲಿಟ್ಟಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು, ಸ್ವಾದ ಫೌಂಡೇಶನ್ ನೆರವು ಪಡೆದ ವಿದ್ಯಾರ್ಥಿಗಳು ಬೆರೆಯವರಿಗೆ ನೆರವು ನೀಡುವಂತೆ ಬೆಳೆಯಬೇಕು ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಸ್ವಾದ ಫೌಂಡೇಶನ್‍ನ ಟ್ರಸ್ಟಿ ರಾಜೇಶ್ ಮಾಂಡ್ಯಂ, ಪ್ರಿಯಮಾಂಡ್ಯಂ, ರಾಮ್‍ನಾರಾಯಣ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

(Visited 19 times, 1 visits today)