ತುಮಕೂರು :

ಕೋವಿಡ್-19 ನಿಯಂತ್ರಣಾ ಸಂಬಂಧ ನಗರದ ಹೊರ ವಲಯದ ಕ್ಯಾತ್ರಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೋವಿಡ್ ಸೋಂಕಿತರಿಗೆ ಒದಗಿಸಲಿರುವ ಚಿಕಿತ್ಸಾ ವ್ಯವಸ್ಥೆ, ಹಾಸಿಗೆ ಸೇರಿದಂತೆ ಮಾರ್ಗಸೂಚಿಗಳನ್ವಯ ಕಲ್ಪಿಸಬೇಕಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಅಧಿಕಾರಿಗಳಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿದರು.

ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಕೋವಿಡ್ ದೃಢಪಟ್ಟು ಹೋಂ ಐಸೋಲೇಷನಲ್ಲಿರುವ ಸೋಂಕಿತರು ಹೋ ಐಸೋಲೇಷನಲ್ಲಿರದೆ ಎಲ್ಲೆಂದರಲ್ಲಿ ಓಡಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸೋಂಕಿತರನ್ನು ಈ ಕೋವಿಡ್ ಕೇರ್‍ಗೆ ಸ್ಥಳಾಂತರ ಮಾಡಲಾಗುವುದು. ತುಮಕೂರಿನ ಕ್ಯಾತ್ಸಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಕಳೆದ ಬಾರಿಯಂತೆಯೇ ಈ ಬಾರಿಯೂ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ 200 ಹಾಸಿಗೆಗಳಿದ್ದು, 24*7 ವೈದ್ಯರು ಮತ್ತು ಶುಶ್ರೂಷಿಕೆಯರು ಇರಲಿದ್ದಾರೆ. ಜಿಲ್ಲಾಡಳಿತದಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತದೆ. ಸೋಂಕಿತರ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ವೈದ್ಯರು ಟ್ರಾಯಾಸಿಂಗ್ ಮಾಡಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸುವ ಸೋಂಕಿತರನ್ನು ಮಾತ್ರ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಿದ್ದಾರೆ.
ಈ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಇತರರಿದ್ದರು.





