ತುಮಕೂರು:
ನಗರದ ವಾಸಿ ಲಕ್ಷ್ಮೀಕಾಂತ ಅಲಿಯಾಸ್ ಚಂದು ಪೊಲೀಸ್ ಇಲಾಖೆಗೆ ಆತ್ಮಹತ್ಯೆ ಬೆದರಿಕೆ ಹಾಕುವ ಮುಖೇನ ಇಡೀ ಇಲಾಖೆಯನ್ನೇ ಬೆದರಿಸಲು ಹೊರಟಿರುವ ಅಪರೂಪದ ಘಟನೆ ವರದಿಯಾಗಿದೆ.
ಸುಮಯ್ಯ ಭಾನು ಎಂಬ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಆಕೆಯ ಮಗಳಿಗೂ ತೊಂದರೆ ಕೊಡುವ ಬೆದರಿಕೆಯ ಆರೋಪದ ಮೇಲೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 13.04.2022ರಂದು ದೂರು ದಾಖಲಾಗಿದೆ.
ದೂರು ದಾಖಲಾಗಿದ್ದರೂ ಸಹ ಲಕ್ಷ್ಮೀಕಾಂತ ಅಲಿಯಾಸ್ ಚಂದು ಎಂಬ ವಂಚಕನನ್ನು ಪೊಲೀಸರು ಬಂಧಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ದೂರು ದಾಖಲಾದ ನಂತರ ತನ್ನ ವಾಟ್ಸಪ್‍ನಿಂದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್ ವಾಡ್ ಮತ್ತು ಅವರ ಅಧೀನ ಅಧಿಕಾರಿಗಳ ವಿರುದ್ಧ ಪ್ರಾಣ ಬೆದರಿಕೆ ಹಾಕಿದ್ದಾನೆ.
ಹಿನ್ನೆಲೆ
ಲಕ್ಷ್ಮೀಕಾಂತ ಅಲಿಯಾಸ್ ಚಂದು ತುಮಕೂರು ನಗರದ ವಾಸಿಯಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಹಾಲಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರ ಸೋದರ ಅಳಿಯನೆಂದು ಬೊಗಳೆ ಬಿಡುತ್ತಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪರಿಚಯಿಸಿಕೊಂಡು ನಮ್ಮ ಮಾವ ಪ್ರಭಾವಿ ರಾಜಕಾರಿಣಿ ಹಾಲಿ ಗೃಹ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವ ಹುದ್ದೆಗಳನ್ನು ಅಲಂಕರಿಸಿರುವ ಡಾ.ಜಿ.ಪರಮೇಶ್ವರ್ ಅವರ ಸೋದರ ಅಳಿಯ ಎಂದು ಸುಳ್ಳು ಹೇಳುತ್ತಾ ಬಹುತೇಕ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳನ್ನು ಯಾಮಾರಿಸಿ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಹಣ ಪಡೆದು ವಂಚಿಸುತ್ತಿದ್ದ.
ಡಾ.ಜಿ.ಪರಮೇಶ್ವರ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ವಂಚಿಸುತ್ತಿರುವ ವಿಚಾರ ಸ್ವತಃ ಪರಮೇಶ್ವರ್ ಅವರಿಗೂ ತಿಳಿದಿರಲಿಲ್ಲ.
ಬ್ರಿಕ್ಸ್ ಇಂಡಸ್ಟ್ರಿ ನಡೆಸುತ್ತಿದ್ದ ಚಂದು ರಿಯಲ್ ಎಸ್ಟೇಟ್ ವ್ಯವಹಾರದ ಕಡೆ ಆಸಕ್ತಿ ಹೊಂದಿದ್ದ.
ವಾರಸುದಾರರಿಲ್ಲದ ಜಮೀನುಗಳಿಗೆ ನಕಲಿ ವಾರಸುದಾರರನ್ನು ಸೃಷ್ಟಿಸಿ ಸುಳ್ಳು ದಾಖಲಾತಿಗಳನ್ನು ಸಿದ್ದಪಡಿಸಿ ಅನ್ಯರಿಗೆ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದ ಎಂಬ ಆರೋಪವಿದೆ.
ಇದರ ಸಂಬಂಧ ಚಂದು ಮತ್ತು ಇತರರ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಇದರಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಪೊಲೀಸರ ಪರಿಚಯವನ್ನೇ ದುರ್ಬಳಕೆ ಮಾಡಿಕೊಂಡು ತನ್ನ ಬಂಧನವಾಗದಂತೆ ನಿರೀಕ್ಷಣಾ ಜಾಮೀನು ಪಡೆದಿದ್ದ.
ನಂತರ ಸುಮಯ್ಯ ಭಾನು ಎಂಬ ಮುಸ್ಲಿಂ ವಿವಾಹಿತೆಯೊಂದಿಗೆ ತಾನು ಸ್ಪೆಷಲ್ ಪೊಲೀಸ್ ಆಫೀಸರ್‍ಯೆಂದು ಪರಿಚಯಿಸಿಕೊಂಡು ಆಕೆಯ ಕೌಟುಂಬಿಕ ಕಲಹವನ್ನು ದುರುಪಯೋಗ ಪಡಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದ. ಸಂತ್ರಸ್ತೆಯ ಗಂಡನನ್ನು ಕೊಲೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ಮನನೊಂದ ಮಹಿಳೆ ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ 04.08.2021ರಂದು ಈತನ ವಿರುದ್ಧ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಅಂದು ಪೊಲೀಸ್ ಅಧಿಕಾರಿಗಳ ಕಾಲು ಕಟ್ಟಿಕೊಂಡು ಪೊಲೀಸರೆದುರೇ ನೊಂದ ಮಹಿಳೆಯ ಕ್ಷಮೆಯಾಚಿಸಿ ರಾಜಿ ಮಾಡಿಕೊಳ್ಳಲು ಅಂಗಲಾಚಿ ಬೇಡಿಕೊಂಡಿದ್ದ ಎಂಬುದಾಗಿ ತಿಳಿದುಬಂದಿದೆ. ಅಂದೇ ಈ ವಂಚಕನನ್ನು ಪೊಲೀಸರು ಬಂಧಿಸಿದ್ದರೆ ಇಂದು ಮತ್ತೆ ಅದೇ ಮಹಿಳೆ ಸಂತ್ರಸ್ತಳಾಗಿ ಮನನೊಂದು ಠಾಣೆಗೆ ಬಂದು ದೂರು ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಮತ್ತೆ ಅದೇ ಮಹಿಳೆಗೆ ಲೈಂಗಿಕ ಕಿರುಕುಳ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವ ಕುರಿತು ಮಹಿಳಾ ಠಾಣೆಯಲ್ಲಿ ದೂರು ದಾಖಲಾದ ಕೂಡಲೇ ತುಮಕೂರಿನ ಎಸ್ಪಿರವರು ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಬೆದರಿಕೆ ಹಾಕುತ್ತಿರಲಿಲ್ಲ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್ ವಾಡ್‍ರವರ ಉತ್ತಮ ಹಾಗೂ ದಕ್ಷ ಆಡಳಿತ ಹಾಗೂ ಸಾರ್ವಜನಿಕರೊಂದಿಗಿನ ಅವಿನಾಭಾವ ಸಂಬಂಧ ರಾಜ್ಯ ವ್ಯಾಪಿ ಪ್ರಶಂಸೆಗೊಳಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇಂತಹವರ ಬಗ್ಗೆ ಈ ವಂಚಕನ ಬಾಯಿಂದ ಕೇಳಿಬಂದಿರುವ ಆರೋಪಕ್ಕೆ ಜನರು ಮಾನ್ಯತೆ ನೀಡುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೆ.ಎಸ್ ಈಶ್ವರಪ್ಪನವರ ಪ್ರಕರಣದ ನಂತರ ತನ್ನ ವಿಡಿಯೋ ಹೇಳಿಕೆಗೆ ಪೊಲೀಸರು ಬೆದರುತ್ತಾರೆ ಎಂಬ ತಂತ್ರಗಾರಿಕೆಯಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿ ತನ್ನ ಬಂಧನವಾಗದಂತೆ ರಕ್ಷಾಕವಚ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಡೀ ಪೊಲೀಸ್ ಇಲಾಖೆಗೆ ಬೆದರಿಕೆ ಹಾಕುವ ಮುಖೇನ ಖಾಕಿಗೆ ಸವಾಲಾಗಿರುವ ವಂಚಕನ ಬಗ್ಗೆ ನಿರ್ದಾಕ್ಷಣ್ಯ ತೋರದೆ ಹೆಡೆಮುರಿ ಕಟ್ಟುವ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

(Visited 1,244 times, 1 visits today)