ತುಮಕೂರು:
ನಗರದ ಹೊರವಲಯದ ಹೆಗ್ಗೆರೆಯ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ (ರಿ) ಕಚೇರಿಯಲ್ಲಿಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಯ್ಯ ಎಂ. ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗುವ ಅವಶ್ಯಕತೆ ಇದೆ. ಪ್ರತಿವರ್ಷ ಅವರ ಜನ್ಮದಿನೋತ್ಸವವನ್ನು ಆಚರಣೆ ಮಾಡುವುದರ ಮೂಲಕ ಅವರ ಕಾರ್ಯಚಟುವಟಿಕೆಗಳನ್ನು ನೆನೆಯುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಡಾ. ಬಾಬು ಜಗಜೀವನರಾಮ್ ಅವರು ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ, ಎಲ್ಲ ಸಮುದಾಯಗಳ ಉನ್ನತಿಗಾಗಿ ಹಗಲಿರುಳು ಶ್ರಮಿಸಿದರು. ಸರ್ವ ಜನಾಂಗಕ್ಕೂ ಸಮಾನವಾದ ಅವಕಾಶಗಳನ್ನು ನೀಡಲು ಪ್ರಯತ್ನಿಸಿದ ಅವರ ಆದರ್ಶಗಳನ್ನು ನೆನೆಯುವ ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆ ಕಾರ್ಯದರ್ಶಿ ಸೋಮಶೇಖರ್ ಆಲ್ಯಾಳ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರದ ಒಬ್ಬ ಶ್ರೇಷ್ಠ ಸಾಮಾಜಿಕ ಚಿಂತಕ. ಎಲ್ಲ ಸಮುದಾಯಗಳಿಗೆ ಸಮಾನವಾದ ಅವಕಾಶಗಳನ್ನು ನೀಡಲು ಭಾರತಕ್ಕೆ ಸಂವಿಧಾನ ನೀಡುವುದರ ಮೂಲಕ ಎಲ್ಲ ಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡಿದವರು. ಎಲ್ಲ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಸಂವಿಧಾನ ರಚಿಸುವುದರ ಮೂಲಕ ಸಮಾನತೆ ಸಾರಿದ ಮಹಾ ಮಾನವತಾವಾದಿಯಾಗಿದ್ದರು ಎಂದರು.
ದೇಶದಲ್ಲಿ ಸರ್ವ ಜನಾಂಗದ ತುಳಿತಕ್ಕೊಳಗಾದ ಎಲ್ಲ ಸಮುದಾಯಗಳನ್ನು ಮೇಲೆತ್ತುವ ಕೆಲಸಕ್ಕೆ ಕೈಹಾಕಿದ ಪ್ರಥಮ ವ್ಯಕ್ತಿಯಾಗಿದ್ದರು. ಅವರ 131ನೇ ಜನ್ಮ ದಿನೋತ್ಸವವನ್ನು ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರದ ಪ್ರತಿಯೊಬ್ಬರು ಸಂವಿಧಾನ ಶಿಲ್ಪಿಯ ವ್ಯಕ್ತಿತ್ವ ಮತ್ತು ಕಾರ್ಯಚಟುವಟಿಕೆಗಳನ್ನು ಮೆಲುಕು ಹಾಕುವ ಕಾರ್ಯ ಮಾಡಬೇಕು. ಅವರ ತತ್ವಾದರ್ಶಗಳನ್ನು ಪಾಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ನಿರ್ದೇಶಕ ಮೈಲಾರಪ್ಪ, ಮುತ್ತು ನರಸಿಂಹ, ಶ್ರೀಕಂಠ ಆರಾಧ್ಯ, ಶಿವಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

(Visited 42 times, 1 visits today)