ತುಮಕೂರು:
ಅಧಿಕಾರಿಗಳು ರೈತಸ್ನೇಹಿಯಾಗಿ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರವನ್ನು ಒದಗಿಸುವತ್ತ ಕಾರ್ಯಪ್ರವೃತ್ತರಾಗಬೇಕು, ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರಿಗೆ ಹತ್ತಿರವಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ದೊಡ್ಡ ಪಾಲನಹಳ್ಳಿಯಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಹತ್ತಿರದಿಂದ ಸ್ಪಂದಿಸುವ ಉದ್ದೇಶದಿಂದ ಸರ್ಕಾರವು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ರೂಪಿಸಿದೆ ಎಂದರು.
ಜನಸಾಮಾನ್ಯರು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದಾಗ ಆಯಾ ಇಲಾಖಾ ಮುಖ್ಯಸ್ಥರು ಶೀಘ್ರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೊಡ್ಡ ಪಾಲನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೆಳಧರ-ಹೊಸಹಳ್ಳಿ ರಸ್ತೆಯು ಹದಗೆಟ್ಟಿರುವ ಬಗ್ಗೆ ಗ್ರಾಮಸ್ಥರು ಈ ಸಂದರ್ಭ ಮನವಿ ಸಲ್ಲಿಸಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳ ಮೂಲಕ ರಸ್ತೆ ದುರಸ್ಥಿಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರದ ನಿಯಮಗಳನ್ವಯ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲಾಗುವುದು ಎಂದರು.
ರೈತರ ಕೆಲಸಗಳು ತ್ವರಿತಗತಿಯಲ್ಲಾಗಬೇಕು ಅಲ್ಲದೆ, ವಿನಾಕಾರಣ ಕಚೇರಿಗಳಿಗೆ ಅಲೆಯುವುದು ತಪ್ಪಿಸಬೇಕು. ರೈತರು ನೀಡುವ ಅರ್ಜಿಗಳಿಗೆ ಹಿಂಬರಹ ನೀಡಬೇಕು, ಸಮಸ್ಯೆಗಳು ಇತ್ಯರ್ಥವಾಗುವಂತಿದ್ದರೆ ತ್ವರಿತಗತಿಯಲ್ಲಿ ಮಾಡಿಕೊಡಬೇಕು, ಕಾನೂನು ತೊಡಕುಗಳಿದ್ದಲ್ಲಿ ಅವರಿಗೆ ಮನವರಿಕೆ ಮಾಡಿಸಬೇಕು ಎಂದರು.
ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದ ಪರಿಹಾರ, ನಿವೇಶನ ಸಮಸ್ಯೆಗಳು, ಶುದ್ಧನೀರಿನ ಘಟಕ ದುರಸ್ಥಿ, ಸಮುದಾಯ ಭವನ ನಿರ್ಮಾಣ, ಪ್ರೌಢಶಾಲಾ ಆವರಣದ ಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟಾಗ, ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಮನವಿಗಳನ್ನು ಇತ್ಯರ್ಥಗೊಳಿಸುವಂತೆ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮತ್ತು ತಹಶೀಲ್ದಾರ್ ನಾಹಿದಾ ಅವರಿಗೆ ಸೂಚಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಸರ್ಕಾರದ ಯೋಜನೆಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಒಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ತಿಳಿಸಿದರು. ರೈತ/ಫಲಾನುಭವಿಗಳು ಸವಲತ್ತುಗಳಿಗಾಗಿ ಕಚೇರಿಗೆ ಹೋಗಿ ಅಲೆದಾಡುವ ಪರಿಸ್ಥಿತಿ ಇಂದಿಲ್ಲ. ಇಂದು ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುವಂತಾಗಿದ್ದು, ರೈತರು/ ನಾಗರಿಕರು ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಕೃಷಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇದೇ ವೇದಿಕೆಯಲ್ಲಿಯೇ ಪಡೆಯಬಹುದೆಂದರಲ್ಲದೆ, ಇಂದು ಗ್ರಾಮದಲ್ಲಿ ಉಳಿದುಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಇಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತರಾಯಪ್ಪ ಗ್ರಾಮದ ಪರಿಚಯ ನೀಡುತ್ತಾ, ಊರಿನಲ್ಲಿ 13ಕ್ಕೂ ಹೆಚ್ಚು ದೇವಾಲಯಗಳಿದ್ದು, ರಾಜ ಗಂಡುಗಲಿ ಕುಮಾರರಾಮನಿಗೆ ಸಂಬಂಧಿಸಿದ ವೀರಗಲ್ಲುಗಳು, ಶಾಸನಗಳು ಉಪಲಬ್ಧವಿರುವುದಾಗಿ ತಿಳಿಸಿದರಲ್ಲದೆ, ಬೆಟ್ಟದ ತಪ್ಪಲಿನಲ್ಲಿರುವ 2 ಪುರಾತನ ದೇವಾಲಯಗಳು ಶಿಥಿಲಗೊಂಡಿವೆ ಎಂದು ಸಭೆಯ ಗಮನಕ್ಕೆ ತಂದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿರುವ ವಿವಿಧ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ವಿವಿಧ ಯೋಜನೆಗಳಡಿ ಆಯ್ಕೆಯಾಗಿದ್ದ 44 ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಂಜೂರಾತಿ ಪತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಯೋಜನಾಧಿಕಾರಿ ನರಸಿಂಹಮೂರ್ತಿ, ಕುಡಿಯುವ ನೀರು ಸರಬರಾಜು ಕಾರ್ಯಪಾಲಕ ಇಂಜಿನಿಯರ್ ಮುತ್ತಪ್ಪ, ತಾಲ್ಲೂಕು ಕೃಷಿ ಅಧಿಕಾರಿ ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ: ವಿಜಯ್ ಕುಮಾರ್, ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

(Visited 1 times, 1 visits today)