ಸಣ್ಣ ಕೈಗಾರಿಕೋದ್ಯಮಿಗಳು ತಪ್ಪದೇ ಪೇಟೆಂಟ್ ಪಡೆಯಲು ಡೀಸಿ ಸಲಹೆ!

ತುಮಕೂರು:

      ಸಣ್ಣ ಕೈಗಾರಿಕೋದ್ಯಮಿಗಳು ತಾವು ಹೊಸದಾಗಿ ಆವಿಷ್ಕರಿಸಿದ ಕೈಗಾರಿಕೆ/ಯಂತ್ರೋಪಕರಣಗಳ ಪೇಟೆಂಟ್(ಹಕ್ಕುಪತ್ರ)ಅನ್ನು ತಪ್ಪದೇ ಪಡೆದಿರಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಅವರು ಸಲಹೆ ನೀಡಿದರು.

      ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಮತ್ತಿತರ ಸರ್ಕಾರಿ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾಜಿನಮನೆಯಲ್ಲಿಂದು ಏರ್ಪಡಿಸಿದ್ದ “ದಕ್ಷಿಣ ಭಾರತದ ಆಗ್ರೋ ಎಕ್ಸ್‍ಪೋ ಕೃಷಿ ಮತ್ತು ಪೂರಕ ವಸ್ತುಪ್ರದರ್ಶನ” ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

      ಈ ವಸ್ತುಪ್ರದರ್ಶನಕ್ಕೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಎಷ್ಟೋ ಮಳಿಗೆಗಳಲ್ಲಿರುವ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನದ ಪೇಟೆಂಟ್ ಪಡೆಯದಿಲ್ಲದಿರುವುದು ಕಂಡುಬಂತು. ಒಂದು ದೇಶವನ್ನು ಅಭಿವೃದ್ಧಿ ದೇಶವೆಂದು ವಿಶ್ವ ಮಟ್ಟದಲ್ಲಿ ಪರಿಗಣಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಂಟ್ ಆಗಿರುವ ಅಂಶವನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಉದ್ಯಮಿಗಳು ತಮ್ಮ ಹೊಸ ಆವಿಷ್ಕಾರ ಮಾಡಿದ ಯಂತ್ರ/ಕೈಗಾರಿಕೆ/ಉತ್ಪನ್ನಗಳಿಗೆ ತಪ್ಪದೇ ಪೇಟೆಂಟ್ ಪಡೆಯಬೇಕು. ಹೊಸದಾಗಿ ಆವಿಷ್ಕರಿಸಿದ ಯಂತಗಳ ಡಿಜೈನ್, ಪ್ರಾಸೆಸ್, ಪ್ರಾಡಕ್ಟ್‍ಗಳಿಗೆ ಪೇಟೆಂಟ್ ಪಡೆಯಲು ಅವಕಾಶವಿದ್ದು, ಎಲ್ಲರೂ ತಪ್ಪದೇ ಪೇಟೆಂಟ್ ಹೊಂದುವ ಮೂಲಕ ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ಸಾಗಲು ನೆರವಾಗಬೇಕು. ಇಲ್ಲದಿದ್ದಲ್ಲಿ ಬೇರೆ ರಾಜ್ಯ/ರಾಷ್ಟ್ರದವರು ನಿಮ್ಮ ಉತ್ಪನ್ನದ ಕೃತಿಸ್ವಾಮ್ಯ(ಕಾಪಿರೈಟ್)ವನ್ನು ಬಳಸಿಕೊಂಡು ರಾಯಲ್ಟಿ(ಪ್ರಭುತ್ವ)ಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

      ಕೃಷಿ ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವವರಿಗಾಗಿ ವೇದಿಕೆ ಕಲ್ಪಿಸಲು ಹಾಗೂ ಅವರಿಗೆ ಉತ್ತೇಜನ ನೀಡಲು ಈ ಪ್ರದರ್ಶನವನ್ನು ಕಾಸಿಯಾ ಸಂಸ್ಥೆ ಏರ್ಪಡಿಸಿದೆ. ಮಾರುಕಟ್ಟೆಯಲ್ಲಿ ದೊಡ್ಡ ಕೈಗಾರಿಕೆಗಳಿಗಿಂತ ಸಣ್ಣ ಕೈಗಾರಿಕೆಗಳಿಗೆ ಅವಕಾಶಗಳು ಕಡಿಮೆ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕಾ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

      ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಸಣ್ಣ ಕೈಗಾರಿಕೆಗಳಿದ್ದು, ಕೇಂದ್ರ /ರಾಜ್ಯ ಸರ್ಕಾರದಿಂದ ಸಣ್ಣ ಕೈಗಾರಿಕೆಗಳನ್ನು ಹೊಸದಾಗಿ ಪ್ರಾರಂಭಿಸಲು ಹಲವಾರು ಯೋಜನೆಗಳಡಿ ಪ್ರೋತ್ಸಾಹಧನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೊಸ ಹಾಗೂ ಯುವ ಕೈಗಾರಿಕೋದ್ಯಮಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಉದ್ಯಮಿಗಳು ಸಣ್ಣ ಕೈಗಾರಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆಯಿದ್ದು, ದೇಶದ ಆರ್ಥಿಕತೆ ಇನ್ನಷ್ಟು ಭದ್ರವಾಗುತ್ತದೆ ಎಂದರಲ್ಲದೆ ಸ್ವಾತಂತ್ರ್ಯಪೂರ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ (ಗುಡಿ)ಕೈಗಾರಿಕೆಗಳಿಂದಲೇ ದೇಶಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿತ್ತು. ಆದರೆ ಬ್ರಿಟೀಷರ ಆಳ್ವಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದ್ದರಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗದೆ ನಶಿಸಿ ಹೋದವು ಎಂದು ಬೇಸರಿಸಿದರು.

      ದೇಶದಲ್ಲಿ ಪ್ರಸ್ತುತ ಶೇ.40ರಷ್ಟು ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಗಾಂಧೀಜಿಯವರ ಕನಸನ್ನು ಯುವ ಉದ್ಯಮಿಗಳು ನನಸಾಗಿಸಬೇಕು.
ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ದೇಶದ ಕೈಗಾರಿಕಾವಲಯದ ಬೆಳವಣಿಗೆ ಸಾಧ್ಯ ಎಂದರು.

       ವಸ್ತುಪ್ರದರ್ಶನದಲ್ಲಿ 110 ಮಳಿಗೆಗಳಲ್ಲಿ ವಿವಿಧ ಕೈಗಾರಿಕೋದ್ಯಮಿ ಪ್ರದರ್ಶಕರು ಭಾಗವಹಿಸಿದ್ದು, ಅತ್ಯುತ್ತಮ ಪ್ರದರ್ಶಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಇಲಾಖೆ ಮಳಿಗೆಗೆ ಉತ್ತಮ ಡೆಕೋರೇಟೆಡ್ ಮಳಿಗೆ ಪ್ರಶಸ್ತಿ; ಉತ್ತಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದ ಡಾಲ್ಫಿನ್ ಇರಿಗೇಷನ್, ಮಾರುತಿ ಕೃಷಿ ಉದ್ಯೋಗ, ಸಿಎಫ್‍ಸಿಎನ್ ಟೆಕ್, ಮಹಾಲಕ್ಷ್ಮಿ ಜ್ಯೂಸ್ ಎಕ್ಸ್‍ಟ್ರಾಕ್ಟ್, ಬಯೋಗ್ರೀನ್ ಅಗ್ರಿಲಿಂಕ್ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
ಅದೇ ರೀತಿ ಮೊದಲನೇ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಉತ್ಪನ್ನ ಪ್ರದರ್ಶಕರಿಗೆ ಸ್ಟಿಲ್ಲರ್ ಹಾಗೂ ಪ್ರೋ ಹಾರ್ವೆಸ್ಟ್ ಸಂಸ್ಥೆಗೆ ಬೆಸ್ಟ್ ಇನ್ನೋವೇಟೀವ್ ಸ್ಟಾರ್ಟರ್ಸ್ ಪ್ರಶಸ್ತಿ; ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ, ಕರ್ನಾಟಕ ಆಗ್ರೋ ಕೆಮಿಕಲ್, ಭೀಷ್ಮ ಮೆಟಲ್ಸ್, ಎಂಇ ಡಿಸೈನರ್ಸ್, ಕವನ ಬಯೋ ಸಲ್ಯುಷನ್ಸ್, ಹ್ಯಾಂಡ್ ಮೇಡ್ ಅಡ್ಡ, ಮತ್ತಿತರ ಸಂಸ್ಥೆಗಳಿಗೆ ಬೆಸ್ಟ್ ಪ್ರಾಡಕ್ಟ್ ಸ್ಟಾರ್ಟರ್ಸ್ ಪ್ರಶಸ್ತಿ ನೀಡಲಾಯಿತು. ನಂತರ ಪ್ರದರ್ಶಕರ ಸಿ.ಡಿ.ಅನ್ನು ಬಿಡುಗಡೆ ಮಾಡಲಾಯಿತು.

      ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್ ನಾಗರಾಜು, ಕಾಸಿಯಾ ಸಂಸ್ಥೆಯ ಅಧ್ಯಕ್ಷ ಆರ್. ರಾಜು, ಉಪಾಧ್ಯಕ್ಷ ಕೆ.ಬಿ. ಅರಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಖಜಾಂಚಿ ಎಸ್.ಎಂ. ಹುಸೇನ್, ಸೌತ್ ಆಗ್ರೋ ಎಕ್ಸ್‍ಪೋ ವೈಸ್ ಛೇರ್ಮನ್ ಬೋರೆಗೌಡ, ಸಂಚಾಲಕ ಸದಾಶಿವ ಆರ್. ಅಮಿನ್, ಮತ್ತಿತರರು ಉಪಸ್ಥಿತರಿದ್ದರು.

(Visited 28 times, 1 visits today)

Related posts