ತುಮಕೂರು:

      ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಸಂಸದರಿಗೆಲ್ಲರಿಗೂ ಸೀಟು ನೀಡಿ ಮುದ್ದಹನುಮೇಗೌಡರೊಬ್ಬರಿಗೆ ಟಿಕೆಟ್ ಕೈ ತಪ್ಪಿರುವುದು ನನಗೂ ನೋವು ತಂದಿದೆ. ಆದರೆ ದೋಸ್ತಿ ಪಕ್ಷಗಳ ಕ್ಷೇತ್ರ ಹಂಚಿಕೆಯಲ್ಲಿ ತುಮಕೂರು ಜೆಡಿಎಸ್ ಪಕ್ಷಕ್ಕೆ ದೊರೆತಿರುವುದರಿಂದ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಒತ್ತಾಯದ ಮೇರೆಗೆ ಈ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

      ನಗರದಲ್ಲಿ ನಿನ್ನೆ ಸಂಜೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೇವಲ ತುಮಕೂರು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯದ 28 ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಬೇಕಾಗಿದೆ. 28 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

      ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಅವರು ಹೇಳಿದರು.
ನಾನು 29 ವರ್ಷಗಳ ಕಾಲ ಎಂಪಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದೇನೆ. ಹಾಗಾಗಿ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ, ಕೆಲವರು ತಮ್ಮನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದರು. ಹಾಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಗುಲಾಬ್ ನಬಿ ಆಜಾದ್ಸೇರಿದಂತೆ ಹಲವು ಗೆಳೆಯರು ನನಗೆ ಚುನಾವಣೆಗೆ ನಿಲ್ಲುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ ನಾನು ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.

      ನಾನು ಈ ಹಿಂದೆಯೇ ಪ್ರಜ್ವಲ್ರೇವಣ್ಣ ಹಾಸನದಿಂದಲೇ ಸ್ಪರ್ಧಿಸಬೇಕು ಎಂದು ನಿರ್ಧಾರ ಮಾಡಿದ್ದೆ. ಹಾಗಾಗಿ ಹಾಸನದಿಂದ ಪ್ರಜ್ವಲ್‍ನನ್ನು ಕಣಕ್ಕಿಳಿಸಲಾಗಿದೆ ಎಂದರು.

      ನನಗೆ ಮಂಡ್ಯದಲ್ಲಿ ನಿಲ್ಲಬೇಕು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬ ಒತ್ತಾಯ ಒಂದು ಕಡೆಯಾದರೆ, ತುಮಕೂರು ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಜಿಲ್ಲೆಯ ಜನತೆ ಒತ್ತಾಯ ಹೇರಿದರು. ಹಾಗಾಗಿ ಈ ಬಾರಿ ಇಲ್ಲಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

      ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 8 ಕ್ಷೇತ್ರ ಬಿಟ್ಟು ಕೊಡಲು ತೀರ್ಮಾನ ಕೈಗೊಳ್ಳಲಾಯಿತು. ಅದರಂತೆ ನಾವು 8 ಕ್ಷೇತ್ರಗಳನ್ನು ಪಡೆದುಕೊಂಡಿದ್ದು, ಬೆಂಗಳೂರು ಉತ್ತರ ಕ್ಷೇತ್ರವನ್ನು ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡುವ ನಿರ್ಧಾರ ಮಾಡಿರುವುದಾಗಿ ಹೇಳಿದರು.

      ಜನರ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಐಕ್ಯತೆಯಿಂದ ಹೋಗಬೇಕು ಎಂದು ಮನವಿ ಮಾಡಿದರು.

      ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಡಿ.ಸಿ. ಗೌರಿಶಂಕರ್, ಕಾಂತರಾಜು, ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್, ಸಿ.ಬಿ. ಸುರೇಶ್‍ಬಾಬು, ಕೆ. ಷಡಕ್ಷರಿ, ಎಂ.ಟಿ. ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

(Visited 14 times, 1 visits today)