ತುರುವೇಕೆರೆ :

      ತಾಲೂಕಿನ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ರವರೊಂದಿಗೆ ತೆರಳಿದ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ತಮ್ಮ ಮಾತೃ ಪಕ್ಷ ಜೆಡಿಎಸ್ ಗೆ ಸೇರ್ಪಡೆಗೊಂಡರು.

       ತಮ್ಮ ರಾಜಕೀಯ ಗುರುಗಳಾಗಿರುವ ದೇವೇಗೌಡರೇ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಗೆಲುವಿಗೆ ಶ್ರಮಿಸುವುದು ತಮ್ಮ ಕರ್ತವ್ಯವಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃಧ್ಧಿಗೆ ದೇವೇಗೌಡರು ಶ್ರಮಿಸುವರು. ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ ನಂಜೇಗೌಡರು ತಾಲೂಕಿನಲ್ಲಿ ದೇವೇಗೌಡರಿಗೆ ನಿರೀಕ್ಷೆಗೂ ಮೀರಿದ ಮತಗಳು ಲಭಿಸುವುವು. ಅವರು ಸ್ಪರ್ಧಿಸುತ್ತಿರುವುದು ಜೆಡಿಎಸ್ ಕಾರ್ಯಕರ್ತರಿಗೆ ರೋಮಾಂಚನವನ್ನು ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಬೆಮಲ್ ಕಾಂತರಾಜ್ ಹಾಗೂ ಇನ್ನಿತರ ಮುಖಂಡರ ನೇತೃತ್ವದಲ್ಲಿ ಜೆಡಿಎಸ್ ನ್ನು ಭದ್ರಗೊಳಿಸಲಾಗುವುದು ಎಂದು ಹೆಚ್.ಬಿ.ನಂಜೇಗೌಡ ಹೇಳಿದರು.

      ಆಶಾಭಾವನೆ – ಜಿಲ್ಲೆಯ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಿಗೆ ಬಹಳ ಸಂತೋಷವನ್ನುಂಟು ಮಾಡಿದೆ. ದೇವೇಗೌಡರ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೂ ಸಹ ಶ್ರಮಿಸುವರು. ದೇವೇಗೌಡರ ಗೆಲುವು ನಿಚ್ಚಳ. ಮತದಾರರು ಜಿಲ್ಲೆಯ ಅಭಿವೃಧ್ಧಿಯನ್ನು ನಿರೀಕ್ಷಿಸಿದ್ದಾರೆ. ಹಾಗಾಗಿ ಪಕ್ಷಾತೀತವಾಗಿ ಎಲ್ಲರೂ ದೇವೇಗೌಡರನ್ನು ಬೆಂಬಲಿಸುವರು ಎಂದು ವಿಧಾನಪರಿಷತ್ ಸದಸ್ಯ ಬೆಮಲ್ ಕಾಂತರಾಜು ಹೇಳಿದರು.

      ಒಂದಾಗಿರುವ ಮುಖಂಡರು – ಕಳೆದ ಚುನಾವಣೆಯಲ್ಲಿ ಕೆಲವು ವೈಯಕ್ತಿಕ ಕಾರಣಕ್ಕೆ ಪಕ್ಷದಿಂದ ದೂರ ಉಳಿದಿದ್ದ ಹಲವಾರು ಮುಖಂಡರು ದೇವೇಗೌಡರ ಗೆಲುವಿಗಾಗಿ ಪಣತೊಟ್ಟು ಒಂದಾಗಿದ್ದಾರೆ. ಇವರಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಡಿ.ರಮೇಶ್ ಗೌಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ ಸಹ ಈಗ ಪಕ್ಷದಲ್ಲಿ ಸಕ್ರಿಯವಾಗಿದ್ದು ದೇವೇಗೌಡರ ಗೆಲುವಿಗೆ ಶ್ರಮಿಸುವರು ಎಂದು ಬೆಮಲ್ ಕಾಂತರಾಜು ಹೇಳಿದರು.

      ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶ್ರೀನಿವಾಸ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಗೋಣಿತುಮಕೂರು ಲಕ್ಷ್ಮೀಕಾಂತ್, ಎಂ.ಡಿ.ರಮೇಶ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ನದೀಮ್ ಸೇರಿದಂತೆ ಇತರರು ದೇವೇಗೌಡರನ್ನು ಭೇಟಿ ಮಾಡಿದ್ದರು.

(Visited 19 times, 1 visits today)