ತುಮಕೂರು:
ಮಾಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಟರಿ ಸಂಸ್ಥೆ ಸಹಯೋಗದಲ್ಲಿ ತುಮಕೂರು ತಾಲೂಕನ್ನು ಹಸಿರು ತಾಲೂಕನ್ನಾಗಿಸುವ ನಿಟ್ಟಿನಲ್ಲಿ ಕೋಟಿ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು ಕೋಟಿ ಗಿಡಗಳನ್ನು ನೆಡಲು ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಮಾರ್ಚ್ 12ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತುಮಕೂರು ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ತಾಲೂಕಿನ ಎಲ್ಲ ಶಾಲೆಗಳನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪ್ರತಿ ಶಾಲೆಗೆ ತಲಾ 2 ಲಕ್ಷ ರೂ.ಗಳನ್ನು ನೀಡಲು ರೋಟರಿ ಸಂಸ್ಥೆ ಮುಂದಾಗಿದೆ. ಮೊದಲಿಗೆ ಸುಮಾರು 30 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪ್ರತೀ ಶಾಲೆಯಲ್ಲಿ ಆಧುನಿಕ ಮಾದರಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡುವ ಬಗ್ಗೆ ಮಾರ್ಚ್ 12ರ ಸಭೆಯಲ್ಲಿ ಚರ್ಚಿಸಲಾಗುವುದು. ಪ್ರತಿಯೊಂದು ಶಾಲೆ, ಅಂಗನವಾಡಿ, ಸರ್ಕಾರಿ ಆಸ್ಪತ್ರೆ ಹಾಗು ಇತರೆ ಸರ್ಕಾರಿ ಕಚೇರಿಗಳ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದಲ್ಲದೆ ರೈತರ ಹೊಲದಲ್ಲಿ ವಿವಿಧ ಜಾತಿಯ ಮರಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಅಮರನಾರಾಯಣ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಿ. ಕೃಷ್ಣಪ್ಪ, ಮತ್ತಿತರರು ಹಾಜರಿದ್ದರು.





