ತುಮಕೂರು:


ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟಿರುವ ದುರ್ದೈವಿಗಳನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಗ್ರಾಮದ ಗಿರೀಶ್ (37) ಹಾಗೂ ಮಾನ್ಯ (17) ಎಂದು ಗುರುತಿಸಲಾಗಿದೆ. ಬಸ್‍ನಲ್ಲಿದ್ದ ಪ್ರಯಾಣಿಕರ ಪೈಕಿ 10ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಗುಬ್ಬಿ ಮತ್ತು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದು ದಾಖಲಿಸಲಾಗಿದೆ.
ಗಾಯಗೊಂಡಿರುವವರಲ್ಲಿ ರಾಕೇಶ್ (21) ಎಂಬುವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಕಂದಿಕೆರೆ ಗ್ರಾಮದಿಂದ ಗಿರೀಶ್ ಮತ್ತು ಮಾನ್ಯ ಅವರು ಕಾಲೇಜು ದಾಖಲಾತಿಗಾಗಿ ತುಮಕೂರಿನತ್ತ ಕಾರಿನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಗುಬ್ಬಿ ಸಮೀಪ ದೊಡ್ಡಗುಣಿ ಬಳಿ ಕಾರು ಬರುತ್ತಿದ್ದಾಗ ತುಮಕೂರು ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ರಸ್ತೆ ವಿಭಜಕ ದಾಟಿ ಕಾರಿಗೆ ಅಪ್ಪಳಿಸಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ತಿರುಗಿ ನಿಂತಿದೆ. ಇದೇ ವೇಳೆ ಕಾರಿನ ಹಿಂದೆ ಬರುತ್ತಿದ್ದ ಮತ್ತೊಂದು ಕೆಎಸ್ಸಾರ್ಟಿಸಿ ಬಸ್ ಕಾರಿಗೆ ಗುದ್ದಿಗೆ. ಅಷ್ಟರಲ್ಲಾಗಲೇ ಕಾರಿನಲ್ಲಿ ಗಿರೀಶ್ ಮತ್ತು ಮಾನ್ಯ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ತಿಳಿದು ಬಂದಿದೆ.
ಕಾರಿಗೆ ಕೆಎಸ್ಸಾರ್ಟಿಸಿ ಬಸ್ ಅಪ್ಪಳಿಸಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗೆಯೇ ಬಸ್‍ನ ಮುಂಭಾಗವೂ ಸಹ ಜಖಂಗೊಂಡಿದೆ.
ಈ ಭೀಕರ ಅಪಘಾತದಿಂದಾಗಿ ತುಮಕೂರು-ಶಿವಮೊಗ್ಗದ ರಸ್ತೆಯಲ್ಲಿ ಕೆಲ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯ ಸುದ್ದಿ ತಿಳಿದ ಕೂಡಲೇ ಗುಬ್ಬಿ ಪೆÇಲೀಸರು ಸ್ಥಳಕ್ಕೆ ಧಾವಿಸಿ ಅಪಘಾತಕ್ಕೆ ಒಳಗಾಗಿ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರೆ ತೆಗೆಯುವಲ್ಲಿ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದರು.
ನಂತರ ಅಸ್ತವ್ಯಸ್ತಗೊಂಡಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗುಬ್ಬಿ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

(Visited 6 times, 1 visits today)