ತುಮಕೂರು:
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ತುಮಕೂರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದ ಇಬ್ಬರು ಪರಿಷ್ಟ ಜಾತಿ ಮತ್ತು ಪಂಗಡದ ಯುವಕರ ಅಮಾನವೀಯ ಹತ್ಯೆಯನ್ನು ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎ.ಎಸ್.ಪಿ ಉದೇಶ್ ಮುಖಾಂತರ ಘಟನೆಗೆ ಸಂಬಂಧಿಸಿದವರನ್ನು ಬಂಧಿಸಿ ಸೂಕ್ತ ತನಿಖೆ ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಾಗೂ ಗ್ರಾಮಗಳಲ್ಲಿ ಬಲಿಷ್ಠರು ಗುಂಪುಗೂಡಿ ಕಾನೂನನ್ನು ಕೈಗೆತ್ತುಗೊಂಡು ದುರ್ಬಲರ ಜೀವ ಹತ್ಯೆ ಮಾಡುವ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆಯಿಂದ ನಾಗರೀಕರಿಗೆ ಕಾನೂನಿನ ಅರಿವನ್ನು ನೀಡಬೇಕೆಂದು ಆಗ್ರಹಿಸಲಾಯಿತು.
ಇತ್ತಿಚ್ಛೆಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರನ್ನು ಬಲಿಷ್ಠ ಸಮುದಾಯಗಳು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಯು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತವರಣ ಸೃಷ್ಠಿಯಾಗಿದ್ದು ಸಾರ್ವಜನೀಕರು ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತುಕೊಂಡು ಹಾರಜಕತೆ ಸೃಷ್ಟಿಸದಂತೆ “ಜಂಗಲ್ ರಾಜ್” ತುಮಕೂರಿನಲ್ಲಿ ಪ್ರಾರಂಭವಾಗದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕೆಂದು ಪಿಯುಸಿಎಲ್‍ನ ಜಿಲ್ಲಾ ಅಧ್ಯಕ್ಷರಾದ ಪ್ರೋ|| ಕೆ. ದೊರೆರಾಜ್ ಒತ್ತಾಯಿಸಿದರು.
ಘಟನೆಗೆ ಕಾರಣರಾದ ಆರೋಪಿಗಳು ಯಾವುದೇ ಜಾತಿಗೆ ಸೇರಿದ್ದರು ಮತ್ತು ಎಷ್ಟೇ ಪ್ರಭಾವಿತರಾಗಿದ್ದರು ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಹತ್ಯೆಯಾದ ಪೆದ್ದನಹಳ್ಳಿ ಗ್ರಾಮದ ಗಿರೀಶ್(30) ಮತ್ತು ಮಂಚಲದೊರೆ ಗ್ರಾಮದ ಗಿರೀಶ್ (32) ಇವರನ್ನು ಊರಿನ ಜಾತ್ರೆ ಸಂದರ್ಭದಲ್ಲಿ ಬೇರೆಡೆಗೆ ಕರೆದೊಯ್ಯದು ಬೀಕರವಾಗಿ ಹತ್ಯೆ ಮಾಡಿರುವುದು ಪೂರ್ವನಿಯೋಜಿತ ಕೃತ್ಯವಾಗಿದ್ದು ಪೊಲೀಸ್ ಇಲಾಖೆ ಈಗಾಗಲೇ ತನಿಖೆ ಕೈಗೊಂಡು ಹಲವಾರು ಜನರನ್ನು ಬಂಧಿಸಿ ತನಿಖೆ ನಡೆಸುತ್ತಿರುವುದು ಸ್ವಾಗತರ್ಹ ಆದರೆ ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸದೆ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ನಾಗರೀಕ ಸಮಾಜ ಕಾನೂನು ಕೈಗೆತ್ತುಗೊಂಡು ಬಲಿಷ್ಠ ಗುಂಪುಗಳು ಅಥವಾ ಸಮುದಾಯಗಳು ದುರ್ಬಲರು, ಬಡವರ ಮೇಲೆ ಹಲ್ಲೆ ಮತ್ತು ಕೊಲೆ ಮಾಡುವ ಮಟ್ಟಕ್ಕೆ ಹೋಗಿ ಅಪರಾಧಿಕರಣ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹತ್ಯೆಗೆ ಒಳಗಾದ ಇಬ್ಬರು ಯುವಕರ ಕುಟುಂಬಗಳಿಗೆ ಸರ್ಕಾರದಿಂದ ತ್ವರಿತವಾಗಿ ಪರಿಹಾರ ದೊರಕಿಸಲು ಮತ್ತು ಗ್ರಾಮದಲ್ಲಿರುವ ದಲಿತ ಕುಟುಂಬಗಳಿಗೆ ರಕ್ಷಣೆ ನೀಡಿ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಪೊಲೀಸ್ ಇಲಾಖೆ ಮುಂದಾಗಬೇಕೆಂದು ಪ್ರಗತಿಪರ ಸಂಘಟನೆಗಳಿಂದ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಎ.ಎಸ್.ಪಿ ಉದೇಶ್ ಪ್ರಕರಣದಲ್ಲಿ ಭಾಗಿಯಾಗಿರುವರನ್ನು ಬಂಧಿಸಲಾಗಿದ್ದು ಇನ್ನೂ ಹಲವರ ಬಂಧನ ಮಾಡಿ ಸೂಕ್ತ ತನಿಖೆ ನಡೆಸಿ ಅರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲಾಗುವುದು. ಮೇಲ್ನೋಟಕ್ಕೆ ಕಳ್ಳತನ ಕೃತ್ಯದಿಂದ ಜೊಡಿ ಕೊಲೆಯಾಗಿರುವುದು ಕಂಡುಬಂದಿದೆ, ಆದರೆ ಸ್ಪಷ್ಟಗೊಂಡಿಲ್ಲ. ಪರಿಶಿಷ್ಟ ಜಾತಿ ದೌರ್ಜನ್ಯ ಕಾಯಿದೆಯನ್ವಯ 60 ದಿನಗಳಲ್ಲಿ ನಾವು ತನಿಖೆ ಪೂರ್ಣಗೊಳಿಸಬೇಕು, ಆದ್ದರಿಂದ ಕಾನೂನಿನ ವ್ಯಾಪ್ತಿಯಲ್ಲಿ ತನಿಖೆ ಮಾಡಿ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವಂತೆ ಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯುನ ಬಿ.ಉಮೇಶ್, ಎನ್.ಕೆ.ಸುಬ್ರಹ್ಮಣ್ಯ, ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ, ದಸಂಸದ ಪಿ.ಎನ್.ರಾಮಯ್ಯ, ಕೊಟ್ಟಶಂಕರ್, ಕೆ.ನರಸಿಂಹಮೂರ್ತಿ, ಸಮಾತ ಸಂಘಟನೆಯ ಹೆಚ್.ಮಾರುತಿ ಪ್ರಸಾದ್, ಕೊಳಗೇರಿ ಸಮಿತಿಯ ಅರುಣ್ ಟಿ.ಜಿ, ಪಿಯುಸಿಎಲ್ ರಾಜ್ಯ ಸಮಿತಿಯ ತಿರುಮಲಯ್ಯ, ಮಾದಿಗ ಪ್ರಾಚಾರಂದೋಲನದ ತೇಜಸ್ ಕುಮಾರ್, ಅಂಬೇಡ್ಕರ್ ಜನಪರ ವೇದಿಕೆ ಸಯ್ಯದ್ ಅಲ್ತಾಫ್, ಎಂ.ರಾಜೇಂದ್ರ ಉಪಸ್ಥಿತರಿದ್ದರು.

(Visited 2 times, 1 visits today)