ತುಮಕೂರು:

      ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬರುವ ಫೆಬ್ರುವರಿ 2 ಹಾಗೂ 3ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಮೇಳದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜರುಗಿದ ಮೇಳದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮೇಳದಲ್ಲಿ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಉದ್ಯೋಗಾರ್ಥಿಗಳು ಭಾಗವಹಿಸಬಹುದಾಗಿದೆ. ಈ ಮೇಳವನ್ನು ಯಶಸ್ವಿಯಾಗಿಸುವ ಸಲುವಾಗಿ ಸ್ವಾಗತ, ವೇದಿಕೆ, ಆರೋಗ್ಯ ಮತ್ತು ಸ್ವಚ್ಛತಾ, ಆಹಾರ, ಸಮನ್ವಯ ಸಮಿತಿ ಸೇರಿದಂತೆ ಮತ್ತಿತರ ಉಪ ಸಮಿತಿಗಳನ್ನು ರಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯಗಳನ್ನು ನಿಯೋಜಿಸಿದರು.

      ನಿರುದ್ಯೋಗಿಗಳಿಗೆ ಸದುಪಯೋಗವಾಗುವಂತೆ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಸಬೇಕು ಹಾಗೂ ಉದ್ಯೋಗಾಕಾಂಕ್ಷಿಗಳಿಗಾಗಿ ಜನವರಿ 23 ರಿಂದ 29ರೊಳಗಾಗಿ ಕೌಶಲ್ಯ ಹೆಚ್ಚಿಸುವ ಸಂದರ್ಶನಗಳನ್ನು ಎದುರಿಸುವ ಬಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಕಾರ್ಯಾಗಾರದಲ್ಲಿ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅನುವಾಗುವಂತೆ ಕಾಲೇಜು ಪ್ರಾಂಶುಪಾಲರನ್ನು ತಾಲೂಕು ಮಟ್ಟದ ಸಭೆಗೆ ಆಹ್ವಾನಿಸಬೇಕು. ಉದ್ಯೋಗಾಸಕ್ತರು ಮೇಳಕ್ಕೆ ನೋಂದಾಯಿಸಿಕೊಳ್ಳಲು ಜನವರಿ 21 ರಂದು ಪ್ರತ್ಯೇಕ ಜಾಲತಾಣ ಲಾಂಚ್ ಮಾಡಬೇಕು. ಎಲ್ಲಾ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಮೇಳದ ಮಾಹಿತಿ ಪ್ರಚಾರ ಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

     ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ 20 ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಹೆಲ್ತ್ ಕ್ಯಾಂಪ್‍ಗಳನ್ನು ತೆರೆಯಬೇಕೆಂದು ಅಧಿಕಾರಿಗಳು ಸೂಚಿಸಿದರು.

      ಮೇಳದ ಸ್ಥಳದಲ್ಲಿ ಉದ್ಯೋಗಾರ್ಥಿಗಳಿಗೆ ಅನುವಾಗುವಂತೆ ಮಾರ್ಗಸೂಚಿ ಫಲಕವನ್ನು ಅಳವಡಿಸಬೇಕೆಂದು ಕಾರ್ಯಕ್ರಮ ಆಯೋಜಕರಿಗೆ ಸೂಚಿಸಿದರಲ್ಲದೆ, ಅಧಿಕಾರಿಗಳೇ ಖುದ್ದಾಗಿ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ನೀಡಿ ಮೇಳಕ್ಕೆ ಆಹ್ವಾನಿಸಬೇಕು. ಶಿಷ್ಟಾಚಾರದಂತೆ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಚಿವರು, ಗಣ್ಯರನ್ನು ಪತ್ರಿಕೆಯಲ್ಲಿ ಮುದ್ರಿಸಬೇಕು ಎಂದು ತಿಳಿಸಿದರು.

      ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯಾಧಿಕಾರಿ ಕೆ. ಶ್ರೀನಿವಾಸ ಅವರು ಮಾತನಾಡಿ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ಸುಮಾರು 100 ಮಳಿಗೆಗಳನ್ನು ತೆರೆದು ಎಂದು ಮಾಹಿತಿ ನೀಡಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ಶಿವಕುಮಾರ್, ಇಲಾಖೆಯ ಸಹಾಯಕ ನಿರ್ದೇಶಕ ಬಿ. ವಿಶ್ವೇಶ್ವರ, ಮತ್ತಿತರ ಅಧಿಕಾರಿಗಳು ಹಾಜರಿದ್ದರು

(Visited 23 times, 1 visits today)