ತುಮಕೂರು:


ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧ ಬಡಾವಣೆಗಳ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದುಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ 20ನೇ ವಾರ್ಡಿನ ಬಿ.ಎ.ಗುಡಿ ಪಾಳ್ಯದ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಶಾಲಾ ಆವರಣದಲ್ಲೇ ಅಂಗನವಾಡಿಗಳನ್ನು ಸ್ಥಾಪಿಸಿದರೆ ಮಕ್ಕಳ ಮುಂದಿನ ಶಿಕ್ಷಣಕ್ಕೆ ಸೂಕ್ತ ವಾತಾವರಣ ರೂಪಿಸಿದಂತಾಗುತ್ತದೆ. ಶಾಲೆಯಿಂದ ದೂರ ಅಂಗನವಾಡಿಗಳು ಇರುವುದಕ್ಕೆ ಬದಲು ಶಾಲಾವರಣದಲ್ಲಿ ಇದ್ದರೆ ಉತ್ತಮ ಎಂದರು.
ನಗರದ ಅನೇಕ ಕಡೆ ಅಂಗನವಾಡಿ ಕಟ್ಟಡಗಳು ದುಸ್ಥಿತಿಯಲ್ಲಿವೆ. ಅಗತ್ಯ ಸೌಕರ್ಯಗಳಿಲ್ಲದ ಕೊಟ್ಟಿಗೆಯಂತಿವೆ. ಅಂತಹ ಕಡೆ ಉತ್ತಮ ಕಟ್ಟಡ ಕಟ್ಟಲಾಗುವುದು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 5-6 ಕೋಟಿ ರೂ.ಗಳನ್ನು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಪ್ರತಿ ಕಟ್ಟಡಕ್ಕೆ ಸುಮಾರು 16 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಶಾಸಕರು ಹೇಳಿದರು.
ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ, ಟೂಡಾ ಸದಸ್ಯ ಜಗದೀಶ್, ಮುಖಂಡರಾದ ಅಣೆತೋಟ ಜಗದೀಶ್, ರಕ್ಷತ್‍ಕುಮಾರ್, ಹನುಮಂತರಾಜು, ಜಿ.ಗಂಗಾಧರ್, ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.

(Visited 3 times, 1 visits today)