ತುಮಕೂರು:


ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜ ಸೇವೆಗೆ ಹೆಸರಾದ ಸಂಸ್ಥೆ. ಹಾಗಾಗಿ ರೋಟರಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಪಕ್ಷಾತೀತವಾಗಿ ಬೆಂಬಲ ದೊರೆತಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೆಚ್.ಆರ್.ಹೊಟೇಲ್ ಸಭಾಂಗಣದಲ್ಲಿ ಕನ್ನಡ ಸೇನೆ ಕರ್ನಾಟಕದ ತುಮಕೂರು ಜಿಲ್ಲಾ ಶಾಖೆ ವತಿಯಿಂದ ರೋಟರಿ 3190ರ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡಸೇನೆಯ ರಾಜ್ಯ ಉಪಾಧ್ಯಕ್ಷ ಮಲ್ಲಸಂದ್ರ ಶಿವಣ್ಣ ಹಾಗೂ ಇನ್ನರ್ ವ್ಹಿಲ್ ಕ್ಲಬ್‍ನ ಅಧ್ಯಕ್ಷೆ ಪರಿಮಳ ಮಲ್ಲಿಕ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ರಾಜ್ಯ, ಜಿಲ್ಲಾ ಮಟ್ಟದಲ್ಲಿರುವ ರೋಟರಿ ಸಂಸ್ಥೆ ತನ್ನ ಸೇವಾ ಕಾರ್ಯಕ್ರಮಗಳನ್ನು ಹೋಬಳಿ ಮತ್ತು ಗ್ರಾಮಗಳ ಮಟ್ಟಕ್ಕೂ ವಿಸ್ತರಿಸಿದರೆ ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಮಲ್ಲಸಂದ್ರ ಶಿವಣ್ಣ ಅವರು ಸಮಾಜ ಸೇವೆಯಲ್ಲಿ ಸದಾ ಮುಂದಿರುವ ವ್ಯಕ್ತಿ. ಅವರು ರೋಟರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ಸಾಮಾಜಿಕ ಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಅವಕಾಶ ದೊರೆತಂತಾಗಿದೆ.ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುವುದು ಒಂದು ದೊಡ್ಡ ಸವಾಲಾಗಿದೆ. ಹಾಗಾಗಿ ರೋಟರಿ ಸಂಸ್ಥೆ ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತು ನೀಡಿದರೆ, ಗ್ರಾಮೀಣ ಭಾಗದ ಜನರನ್ನು ಬಹುವೇಗವಾಗಿ ತಲುಪಬಹುದು ಎಂದು ಆರ್.ರಾಜೇಂದ್ರ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವಸ್ವಾಮೀಜಿ ಆಶೀರ್ವಚನ ನೀಡುತ್ತಾ, ಮನುಷ್ಯ ಹುಟ್ಟು, ಸಾವಿನ ನಡುವೆ ಪಾಪವನ್ನು ಬಿಟ್ಟು, ಪುಣ್ಯವನ್ನಷ್ಟೇ ತೆಗೆದುಕೊಂಡು ಹೋಗಲು ಸಾಧ್ಯ. ಇಂತಹ ಪುಣ್ಯ ನಾವು ಮಾಡುವ ಧಾನ, ಧರ್ಮಗಳಲ್ಲಿ ಆಡಗಿರುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡುವ ಕೆಲಸ ಪೋಷಕರಿಂದ ಆಗಬೇಕಿದೆ ಎಂದರು.
ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ಕನ್ನಡ ನಾಡು, ನುಡಿ,ಜಲ, ನೆಲದ ಹೋರಾಟಗಳಲ್ಲಿ ತುಮಕೂರು ಜಿಲ್ಲೆ ಯಾವಾಗಲು ಮುಂದಿದೆ. ಇದಕ್ಕೆ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣನವರಂತಹ ಮುಂಚೂಣಿ ನಾಯಕ ನೇತೃತ್ವವಿರುವುದೇ ಕಾರಣ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೋಟರಿ 3190ರ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ,117 ವರ್ಷಗಳ ಇತಿಹಾಸ ಇರುವ ರೋಟರಿ ಸಂಸ್ಥೆ ವಿಶ್ವದಲ್ಲಿ ಪೊಲಿಯೋ ನಿಮೂರ್ಲನೆ ಮಾಡಿದ ರೀತಿಯಲ್ಲಿಯೇ ಅನಕ್ಷರತೆಯನ್ನು ತೊಲಗಿಸಲು ಶೇ100 ಸಾಕ್ಷರತೆಯನ್ನು ಸಾಧಿಸುವ ಸಂಕಲ್ಪ ಮಾಡಿದೆ.ಹಾಗಾಗಿ ಮುಂದಿನ ವರ್ಷಗಳಲ್ಲಿ ಹೆಚ್ಚು ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಹರಿದು ಬರಲಿದೆ.ನಾನು ಕೂಡ ರೈತರ ಅಭಿವೃದ್ದಿ ಮತ್ತು ಗ್ರಾಮೀಣ ಭಾಗದ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್,ಇಂದು ಹಲವು ಸಂಘ ಸಂಸ್ಥೆಗಳು ಕೇವಲ ವಿಸಿಟಿಂಗ್ ಕಾರ್ಡಿಗೆ ಸಿಮೀತವಾಗಿರುವಾಗ,ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಾ ಬಂದಿದೆ. ಸಮಾಜಸೇವಕರಾಗಿರುವ ಮಲ್ಲಸಂದ್ರ ಶಿವಣ್ಣನಂತವರು ಈ ಸಂಸ್ಥೆಯ ಅಧ್ಯಕ್ಷರಾಗಿರುವುದು,ಅವರ ಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉದ್ಯಮಿ ಟಿ.ಆರ್.ಸದಾಶಿವಯ್ಯ, ಇನ್ನರ್‍ವ್ಹಿಲ್ ಅಧ್ಯಕ್ಷೆ ಶ್ರೀಮತಿ ಪರಿಮಳ ಮಲ್ಲಿಕ್ ಮಾತನಾಡಿದರು. ವೇದಿಕೆಯಲ್ಲಿ ಕನ್ನಡ ಸೇನೆಯ ವೆಂಕಟಾಚಲ, ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಕುಮಾರ್, ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ವೆಂಕಟೇಶಪ್ಪ, ನಯಾಜ್ ಅಹಮದ್, ಮುನಿಕೃಷ್ಣೇಗೌಡ, ಶ್ರೀಮತಿ ಮೀನಾಕ್ಷಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 8 times, 1 visits today)