ತುಮಕೂರು:


ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಡಬಲ್ ಇಂಜಿನ್ ಸರ್ಕಾರ ಬೇಕಾ ಅಥವಾ ಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಸರ್ಕಾರ ಬೇಕಾ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ತುಮಕೂರು ಗ್ರಾಮಾಂತರ ಮತ್ತು ನೆಲಮಂಗಲದಲ್ಲಿ ಮಂಗಳವಾರ ಆಯೋಜಿಸಿದ್ದ ಜನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಡಬಲ್ ಇಂಜಿನ್ ಸರ್ಕಾರ. ಇದರಿಂದಾಗಿಯೇ ರೈತರಿಗೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ತಲುಪುತ್ತಿವೆ. ಆದರೆ ಕಾಂಗ್ರೆಸ್ ನಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಏರಿಗೆ ಎಳೆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ನೀರಿಗೆ ಎಳೆಯುತ್ತಿದ್ದಾರೆ. ಇಂತಹ ಪಕ್ಷದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ನಮ್ಮದು ಜನಪರ ಸರ್ಕಾರ, ಜನರಿಗಾಗಿ ಜಾರಿಗೊಳಿಸಿದ ಯೋಜನೆಗಳು ಜನರಿಗೆ ತಲುಪಿವೆ. ಹಾಗಾಗಿ ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ನವರು ವ್ಯಕ್ತಿ ಉತ್ಸವ ಮಾಡಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಜಾಪ್ರಭುತ್ವವೇ ಜನರ ಹಬ್ಬವಾಗಿದೆ. ಇದನ್ನು ಬಿಜೆಪಿ ಮಾಡುತ್ತಿದೆ. ಜನರಿಗಾಗಿ, ಜನರಿಗೋಸ್ಕರ ಮತ್ತು ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ವ್ಯಕ್ತಿಪೂಜೆ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು. ಈ ಹಿಂದೆ ಕೋವಿಡ್ ಕಾರಣ ಯಾವುದೇ ಸಮಾವೇಶ ಮಾಡಲು ಸಾಧ್ಯವಾಗಲಿಲ್ಲ. ಜನರು ಪಕ್ಷದ ಪರ ಇದ್ದಾರೆ, ಪಕ್ಷದ ಮೇಲೆ ಜನರಿಗೆ ಅಭಿಮಾನ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಇದೇ 28ರಂದು ಸಮಾವೇಶದಲ್ಲಿ ಸೇರುವ ಜನಸಾಗರವನ್ನು ಕಂಡು ಬಿಜೆಪಿ ಶಕ್ತಿ ಏನು ಎಂಬುದು ಅರಿವಾಗಬೇಕು. ಆ ಮೂಲಕ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸುಲಭವಾಗಲಿದೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಲ್ಲರಿಗೂ ಆರೋಗ್ಯ ಸಿಗುತ್ತಿದೆ. ಇದನ್ನು ಮಧ್ಯಮವರ್ಗದ ಜನರಿಗೂ ವಿಸ್ತರಣೆ ಮಾಡಲಾಗಿದೆ ಎಂದರು. ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸಲು ಉದ್ಧೇಶಿಸಲಾಗಿದೆ. ಮೊದಲ ಕಾರ್ಯಕ್ರಮ ದೊಡಬಳ್ಳಾಪುರದಲ್ಲಿ ನಡೆಯಲಿದ್ದು, ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ಜಿಲ್ಲೆಗಳಿಂದ ಆಗಮಿಸುವ ಜನಸಾಗರ ವಿರೋಧಪಕ್ಷಗಳಿಗೆ ಎಚ್ಚರಿಕೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಒಂದು ಸಮುದಾಯದ ಬೆಂಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ಹೋಲಿಕೆ ಮಾಡುವುದು ಶೋಭೆ ತರಲ್ಲ. ಈ ಹೇಳಿಕೆಗೆ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿದೆ. ಹೋಲಿಕೆ ಮಾಡುವುದು, ವರ್ಗೀಕರಣ ಮಾಡುವುದು ಕಾಂಗ್ರೆಸ್ ಹುಟ್ಟುಗುಣ. ಧರ್ಮ ಧರ್ಮದ ಮಧ್ಯೆ, ವರ್ಗ ವರ್ಗಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಬಿರುಕು ಮೂಡಿಸುವುದು ಕಾಂಗ್ರೆಸ್ ಹುಟ್ಟುಗುಣ ಎಂದು ಕಿಡಿ ಕಾರಿದರು.

(Visited 1 times, 1 visits today)