ತುಮಕೂರು:


ತಿಪಟೂರು ನಗರದಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಎನ್‍ಎಸ್‍ಯುಐ ಕಾರ್ಯಕರ್ತರು ನಡೆಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರುವ 25 ಮಂದಿ ಎನ್‍ಎಸ್‍ಯುಐ ಕಾರ್ಯಕರ್ತರಿಗೆ ಗೌರವಾನ್ವಿತ ನ್ಯಾಯಾಲಯ ಬುಧವಾರ ಸಂಜೆ ಜಾಮೀನು ಮಂಜೂರು ಮಾಡಿದ್ದು, ಸತ್ಯಕ್ಕೆ ಸಿಕ್ಕ ಜಯ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಅವರು ಬೇಲ್ ಮಂಜೂರು ಮಾಡಿ ಆದೇಶಿಸಿದ್ದು, ಆದೇಶ ಪತ್ರದಲ್ಲಿ ಒಬ್ಬರಿಗೆ ಇಬ್ಬರು ಶ್ಯೂರಿಟಿ ನೀಡಬೇಕೆಂದು ಆ ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ವಿಧಿ ವಿಧಾನಗಳು ಕಾರಾಗೃಹದ ಮುಖ್ಯಸ್ಥರಿಗೆ ತಲುಪಿದ ನಂತರ ಬಂಧಿಯಾಗಿರುವ ಎಲ್ಲಾ ಎನ್ ಎಸ್‍ಯುಐ ಕಾರ್ಯಕರ್ತರು ಗುರುವಾರ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯ ಪರಿಷ್ಕರಣೆ ವಿರೋಧಿಸಿ ಹಾಗೂ ಇದುವರೆಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡದೇ ಇರುವುದನ್ನು ಖಂಡಿಸಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆಯೇ ವಿನಃ ಯಾವುದೇ ದುರುದ್ಧೇಶ ಪೂರ್ವಕವಲ್ಲ ಎಂದರು.
ಪ್ರತಿಭಟನೆ ನಡೆಸಿದ ಎನ್‍ಎಸ್‍ಯುಐ ಕಾರ್ಯಕರ್ತರ ವಿರುದ್ಧ ಬಾಂಬ್ ಅಥವಾ ಸ್ಪೋಟಕ ವಸ್ತುಗಳನ್ನು ಉಪಯೋಗಿಸುವಂತಹವರಿಗೆ ಹಾಕುವ 462 ಕಾನೂನನ್ನು ಹಾಕಿ ಜಾಮೀನು ರಹಿತ ಪ್ರಕರಣ ದಾಖಲಿಸಿ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಿರುವ ಕ್ರಮ ಖಂಡನೀಯ ಎಂದರು. ವಿದ್ಯಾರ್ಥಿಗಳ ಬಿಡುಗಡೆಗಾಗಿ ಕೆಪಿಸಿಸಿ ವಕೀಲರ ಘಟಕದಿಂದ ಕಳೆದ ಮೂರು ದಿನಗಳಿಂದಲೂ ನ್ಯಾಯಾಲಯದಲ್ಲಿ ಬೇಲ್‍ಗೋಸ್ಕರ ಶ್ರಮಪಟ್ಟಿದ್ದಾರೆ. ಬುಧವಾರ ಸಂಜೆ ಬೇಲ್ ಮಂಜೂರು ಆಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸತ್ಯಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.
ದೆಹಲಿಯ ಮುಖ್ಯಮಂತ್ರಿ ಮನೆಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಾಂಧಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ, ಆದರೆ ಕೇವಲ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದರೆಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಿರುವುದು ಖಂಡನೀಯ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಗುಬ್ಬಿಯಲ್ಲಿ ಅಮಾಯಕ ದಲಿತ ಯುವಕರ ಕೊಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಅಲ್ಲಿಗೆ ಯಾವ ಸಚಿವರೂ ಭೇಟಿ ನೀಡಿ ಅವರಿಗೆ ಸಾಂತ್ವನವಾಗಲೀ ಅಥವಾ ಪರಿಹಾರವಾಗಲಿ ನೀಡಲಿಲ್ಲ, ಆದರೆ ಶಿಕ್ಷಣ ಸಚಿವರ ಮನೆ ಮುಂದೆ ಎನ್‍ಎಸ್ ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಸುದ್ದಿ ತಿಳಿದ ಕೂಡಲೇ ಅಲ್ಲಿಗೆ ಗೃಹಮಂತ್ರಿ ಭೇಟಿ ನೀಡುತ್ತಾರೆ. ಸಚಿವರು, ಮಾಜಿ ಸಚಿವರು ಭೇಟಿ ನೀಡುತ್ತಾರೆ. ಬಿಜೆಪಿಯವರಿಗೊಂದು ನ್ಯಾಯ ಇತರರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಇಲ್ಲ ಸಲ್ಲದ ಸೆಕ್ಷನ್ ಹಾಕಿ ಎನ್‍ಎಸ್‍ಯುಐ ಕಾರ್ಯಕರ್ತರನ್ನು ಜೈಲಿಗೆ ತಳ್ಳುವುದೇ ಇವರ ಕೆಲಸ. ಬಿಜೆಪಿ ಮತ್ತು ಆರ್‍ಎಸ್ ಎಸ್ ನವರು ಇಲ್ಲ ಸಲ್ಲದ ಕೇಸ್‍ಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಹಾಕುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಎನ್‍ಎಸ್‍ಯುಐ ಕಾರ್ಯಕರ್ತರಿಗೆ ಬೇಲೆ ಮಂಜೂರಾಗಿದ್ದು, ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಇನ್ನು ಮುಂದಾದರೂ ಬಿಜೆಪಿ ಬುದ್ದಿ ಕಲಿಯಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಗೌಡ, ರೇವಣ್ಣ ಸಿದ್ಧಪ್ಪ, ಮಂಜುನಾಥ್, ನಟರಾಜ್, ಪ್ರಕಾಶ್, ಶಿವಾಜಿ, ಎಸ್.ವಿ.ಗೀತ, ಸಾಹೆರಾ, ಸುಮುಖ್ ಕೊಂಡವಾಡಿ ಮುಂತಾದವರು ಹಾಜರಿದ್ದರು.

(Visited 48 times, 1 visits today)