ತುಮಕೂರು :

      ಹೆಲ್ತ್ ಇನ್ಸ್‍ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಸೂಚನೆ ಮೇರೆಗೆ ಬ್ಯಾನರ್ ಮತ್ತು ಬಂಟಿಂಗ್ ತೆರವುಗೊಳಿಸಲು ಹೋದ ಪೌರ ಕಾರ್ಮಿಕ ನರಸಿಂಹಯ್ಯ (34) ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

      ಹದಿನೈದನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಟೌನ್‍ಹಾಲ್ ಸರ್ಕಲ್‍ನಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬಿಣದ ಸಲಾಕೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಲು ಹೋದಾಗ ಈ ದುರಂತ ನಡೆದಿದೆ. ಮೃತನ ಸಾವಿಗೆ ಸುರಕ್ಷತಾ ಸಲಕರಣೆಗಳನ್ನು ನೀಡದೇ ಇರುವುದೇ ಕಾರಣ ಎಂದು ಪೌರಕಾರ್ಮಿಕರ ಸಂಘ ಸಿಐಟಿಯು ಆರೋಪಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

      ಶಾಂತಿನಗರದ ವಾಸಿ ನರಸಿಂಹಯ್ಯ ಮೃತಪಟ್ಟಿರುವ ದುರ್ದೈವಿ. ಪೌರಕಾರ್ಮಿಕ ನರಸಿಂಹಯ್ಯ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲಾ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. 20 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ, ಮಕ್ಕಳವಿದ್ಯಾಭ್ಯಾಸಕ್ಕೆ ನೆರವು ನೀಡದೆ ಶವ ಎತ್ತಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.

      ಬೆಳಗ್ಗೆ 8.30ರಿಂದ 10.30ರವರೆಗೂ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಸಿಂಗ್, ನಗರಪಾಲಿಕೆ ಹಂಗಾಮಿ ಆಯುಕ್ತರು, ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು ಮತ್ತು ಶಾಸಕ ಜ್ಯೋತಿಗಣೇಶ್ ಸ್ಥಳಕ್ಕೆ ಬಂದರು.

      ಜಿಲ್ಲಾಧಿಕಾರಿ ರಾಕೇಶ್  ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಕಾರ್ಮಿಕರು ಒತ್ತಡ ಹೇರಿದ್ದರಿಂದ ತಕ್ಷಣವೇ ಪಾಲಿಕೆಯಿಂದ 5 ಲಕ್ಷ ಪರಿಹಾರ, ಮುಂದಿನ ದಿನಗಳಲ್ಲಿ ಸರ್ಕಾರದಿಂದ 5 ಲಕ್ಷ ರೂಪಾಯಿ, ಮೃತನ ಪತ್ನಿ ರತ್ನಮ್ಮ ಅವರಿಗೆ ನೇರಪಾವತಿಯಡಿ ಕೆಲಸ ಮತ್ತು ದಿಬ್ಬೂರಿನಲ್ಲಿ ಒಂದು ಮನೆ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

      ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಪೌರಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ನೀಡುವಂತೆ ಎರಡು ಬಾರಿ ಮನವಿ ಪತ್ರ ನೀಡಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ. ಗಮ್‍ಬೂಟ್ ಮತ್ತು ಕೈಗೆ ಹಾಕಿಕೊಳ್ಳುವ ಕೈಗವಸು ನೀಡಿದ್ದರೆ ಇಂತಹ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಈ ಸಂಬಂಧ ಕೂಡಲೇ ಸಭೆ ನಡೆಸಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಯಾವುದೇ ತರಬೇತಿ ನೀಡದೆ ಎಲ್ಲಾ ಕೆಲಸಗಳನ್ನು ಪೌರಕಾರ್ಮಿಕರಿಂದಲೇ ಮಾಡಿಸಲಾಗುತ್ತಿದೆ. ಮ್ಯಾನ್‍ಹೋಲ್‍ಗೆ ಇಳಿಸುವುದು, ಚರಂಡಿ ಸ್ವಚ್ಚತೆ, ಹಂದಿ, ದನ ಹಿಡಿಯುವುದು, ವಿದ್ಯುತ್ ಕಂಬ ಹತ್ತಿಸಿ ಬ್ಯಾನರ್ ಬಂಟಿಂಗ್ ತೆರೆವುಗೊಳಿಸುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಹೀಗಾಗಿ ವಿಭಾಗವಾರು ವಿಂಗಡಣೆ ಮಾಡಿ ತರಬೇತಿ ನೀಡಿ ಕೆಲಸದ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ಬ್ಯಾನರ್ ಕಟ್ಟಲು ಅನುಮತಿ ಪಡೆದಿಲ್ಲ ಮತ್ತು ಬ್ಯಾನರ್ ಬಟ್ಟಿದವರೇ ಅವುಗಳನ್ನು ತೆರವುಗೊಳಿಸಬೇಕು ಎಂಬ ನಿಯಮವಿದ್ದರೂ ಅದು ಪಾಲನೆಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

(Visited 26 times, 1 visits today)