ತುಮಕೂರು:


ಮುನ್ಸಿಪಾಲ್ ಕಾರ್ಮಿಕರ ಸೇವೆಯನ್ನು ಏಕಕಾಲದಲ್ಲಿ ಖಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ಮುನಿಸಿಫಲ್ ಕಾರ್ಮಿಕರ ಸಂಘ, ಪೌರ ಕಾರ್ಮಿಕರ ಸಂಘ, ಪಾಲಿಕೆ ಆಟೋ ಚಾಲಕರು ಮತ್ತು ಸಹಾಯಕರ ಸಂಘ, ಜಿಲ್ಲಾ ನೀರು ಸರಬರಾಜು ನೌಕರರ ಸಂಘ ಹಾಗೂ ಪೌರ ಕಾರ್ಮಿಕರ ಜಂಟಿ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪೆಂಡಾಲ್ ಹಾಕಿಕೊಂಡು ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರು ಏಕಕಾಲದಲ್ಲಿ ತಮ್ಮ ಸೇವೆಯನ್ನು ಯಾವುದೇ ತಾರತಮ್ಯ ಮಾಡದೆ ಖಾಯಂಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಘೋಷಣೆಗಳನ್ನು ಕೂಗಿದರು.
ರಾಜ್ಯದ ಎಲ್ಲಾ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಾಗೂಲಿ ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ, ಪಾರ್ಕ್, ಸ್ಮಶಾನ, ಘನ ತ್ಯಾಜ್ಯ ಘಟಕ, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ನೀರು ಸರಬರಾಜು ನೌಕರರನ್ನು ಒಂದೇ ಬಾರಿಗೆ ಖಾಯಂಗೊಳಿಸುವಂತೆ ಮುಷ್ಕರ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಮುನಿಸಿಫಲ್ ಕಾರ್ಮಿಕರ ಸಂಘದ ಖಜಾಂಚಿ ವೆಂಕಟೇಶ್, ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಒಳಚರಂಡಿ ಕಾರ್ಮಿಕರು, ಕಸದ ಆಟೋ ಚಾಲಕರು, ಕಾರ್ಮಿಕರು, ಲೋಡರ್‍ಗಳನ್ನು ಯಾವುದೇ ವಯೋಮಿತಿ ಪರಿಗಣಿಸದೆ, ತಾರತಮ್ಯ ಮಾಡದೆ ಏಕಕಾಲದಲ್ಲಿ ಖಾಯಂಗೊಳಿಸಬೇಕು. ಈ ಬಗ್ಗೆ ಸರ್ಕಾರ ಇನ್ನೆರಡು ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ನಮ್ಮ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಕೆಯನ್ನು ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ನೇರ ಪಾವತಿ ಪೌರ ಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದಿ, ಮನೆ-ಮನೆ ಕಸ ಸಂಗ್ರಹಿಸುವ ಪೌರ ಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಪಾರ್ಕ್, ಸ್ಮಶಾನ, ಘನ ತ್ಯಾಜ್ಯ ಘಟಕ, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟು ಎಲ್ಲಾ ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಮಾಡಲೇಬೇಕು ಎಂದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು ಎಂದು ಮನವಿ ಮಾಡಿದರು.
ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರ ಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ನಗರಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ. ಈ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಅನಿರ್ಧಿಷ್ಟ ಮುಷ್ಕರದಲ್ಲಿ ನೂರಾರು ಮಂದಿ ಪೌರ ಕಾರ್ಮಿಕರ ಪಾಲ್ಗೊಂಡಿದ್ದಾರೆ.

(Visited 3 times, 1 visits today)