‘ಜಾತ್ರೆ ಎಂದರೆ ದೇವರ ಉತ್ಸವ, ರಥೋತ್ಸವ, ಮೆರವಣಿಗೆ, ವಿಶೇಷ ಪೂಜೆ ಸೇರಿದಂತೆ ಶ್ರದ್ಧಾಭಕ್ತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಜತೆಗೆ ನೆರೆದ ಭಕ್ತರ ಮನರಂಜನೆಗಾಗಿ ನಾಟಕ, ನೃತ್ಯ, ಗಾಯನ, ರಸಮಂಜರಿ ವಿಭಿನ್ನ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ ಇತ್ಯಾದಿ ತಟ್ಟನೆ ನೆನಪಿಗೆ ಬರುತ್ತದೆ.

ಆದರೆ, ತುಮಕೂರಿನ ಸಿದ್ಧಗಂಗಾ ಪವಿತ್ರ ಕ್ಷೇತ್ರದಲ್ಲಿ ನಡೆಯುವ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದಕ್ಕೆ ವಿಭಿನ್ನವಾಗಿದೆ. ‘ರೈತರಿಂದ ರೈತರಿಗಾಗಿ’ ಸಿದ್ಧಗಂಗೆ ಜಾತ್ರೆ ನಡೆಯುತ್ತದೆ. 116 ವರ್ಷ ಇತಿಹಾಸ ಹೊಂದಿರುವ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಮಹಾಶಿವರಾತ್ರಿಯ ಮರುದಿನ ರಥೋತ್ಸವ ಜರುಗಿಸುವುದು. ಆರಂಭದಿಂದಲೂ ನಡೆದು ಬರುತ್ತಿರುವ ಸಂಪ್ರದಾಯ.

      ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ತೆರೆಯಲಾಗಿದ್ದ ರಾಜ್ಯ ಸರ್ಕಾರದ ಸಾಧನೆ ಮತ್ತು ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

      ಮಳಿಗೆಯನ್ನು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಫೆಬ್ರವರಿ 12ರಂದು ಉದ್ಘಾಟಿಸಿದರು. 2019ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಉಂಟಾದ ಪ್ರವಾಹದಲ್ಲಿ ತೊಂದರೆಗೊಳಗಾದ ಕುಟುಂಬಗಳಿಗೂ ತಲಾ 10,000 ರೂ.ಗಳ ಪರಿಹಾರ. 104 ಜನರ ಜೀವಹಾನಿಯಾಗಿದ್ದು, ತಲಾ 5 ಲಕ್ಷ ರೂ. ಮತ್ತು ಅಸುನೀಗಿದ ಜಾನುವಾರಗಳಿಗೆ 16 ರಿಂದ 30 ಸಾವಿರ ರೂ.ಗಳ ಪರಿಹಾರ. ಲೋಕೊಪಯೋಗಿ ಇಲಾಖೆ ವತಿಯಿಂದ 1738 ಕಾಮಗಾರಿಗಳನ್ನು ಕೈಗೊಳ್ಳಲು 750 ಕೋಟಿ ರೂ. ಬಿಡುಗಡೆ, ವಸತಿ ಕಾಮಗಾರಿಗಳಿಗೆ 1000 ಕೋಟಿ ರೂ.ಬಿಡುಗಡೆ, 97920 ಮನೆಗಳ ಪೈಕಿ 92,267 ಮನೆಗಳಿಗೆ 350 ಕೋಟಿ.ರೂ ಬಿಡುಗಡೆ, ಎಸ್‍ಡಿಆರ್‍ಎಫ್ ಯೋಜನೆಯಡಿ 417.93 ಕೋಟಿ ರೂ. ಬಿಡುಗಡೆ, ಕಲ್ಯಾಣ ಕರ್ನಾಟಕ ಭಾಗದ 21 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ. ಅಪೌಷ್ಟಿಕತೆ ನಿವಾರಣೆ ಮತ್ತು ಚಿಕಿತ್ಸೆ ಫಲಿತಾಂಶ ಉತ್ತಮಗೊಳಿಸಲು ಹೆಚ್ಚಿನ ಒತ್ತು. ಕಲ್ಯಾಣ ಕರ್ನಾಟಕದ ಸಮಗ್ರ ಕಲ್ಯಾಣವೇ ಸರ್ಕಾರದ ಧ್ಯೇಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯ ಗುರಿ ಹೊಂದಿರುವ ಚಿತ್ರಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.

1905ರಲ್ಲಿ ಚಾಲನೆ:

     ಆರು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ಸಿದ್ಧಗಂಗಾ ಮಠದಲ್ಲಿ ಪ್ರಥಮ ಬಾರಿಗೆ 1905 ರಲ್ಲಿ 10 ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆರಂಭದಿಂದ ಈವರೆಗೂ ಜಾತ್ರೆಯಲ್ಲಿ ಎತ್ತ ಕಣ್ಣಾಯಿಸಿದರೂ ರೈತ ಕಾಳಜಿ ಕಣ್ಣಿಗೆ ನೇವರಿಸುತ್ತದೆ. ಮೊದಲ ವರ್ಷದಿಂದಲೇ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದ ಜತೆಗೆ, ರಾಸುಗಳ ಜಾತ್ರೆಗೂ ಚಾಲನೆ ನೀಡಲಾಯಿತು. ರೈತಪರ ನಿಲುವು ಹೊಂದಿದ್ದ ಅಂದಿನ ಮಠಾಧ್ಯಕ್ಷ ಉದ್ಧಾನ ಶಿವಯೋಗಿಗಳು ತೆಗೆದುಕೊಂಡ ನಿರ್ಧಾರದಂತೆ ಈವರೆಗೂ, ರಾಸುಗಳ ಜಾತ್ರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಹೊಸ ಸ್ವರೂಪ:

      ‘ಬದಲಾವಣೆ ಜಗದ ನಿಯಮ’ ಎಂಬಂತೆ ಬದಲಾಗುತ್ತಿರುವ ಪರಿಸ್ಥಿತಿಗೆ ಎಲ್ಲಾ ವರ್ಗದವರೂ ಹೊಂದಿಕೊಂಡು ಹೋಗಬೇಕು. ಅವರಿಗೆಲ್ಲ ತರಬೇತಿ, ಮಾರ್ಗದರ್ಶನ ಸಿಗಬೇಕು. ಆದಾಗ್ಯೂ, ರೈತ ಸಮುದಾಯಕ್ಕೆ ಬದಲಾವಣೆ ಸ್ವಲ್ಪ ಕಷ್ಟಸಾಧ್ಯ. ಇದನ್ನು ಗಮನಿಸಿದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಲಿಂ.ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮ ಕಲ್ಪನೆಯಂತೆ 1964ರಲ್ಲಿ ‘ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ ಕ್ಕೆ ನಾಂದಿ ಹಾಡಿದರು. ‘ರೈತರಿಂದ, ರೈತರಿಗಾಗಿ, ರೈತರ ಅನುಕೂಲ’ಕ್ಕಾಗಿಯೇ ಜಾತ್ರೆ ಸಮಯದಲ್ಲಿ 15 ದಿನಗಳ ಕಾಲ ವಸ್ತು ಪ್ರದರ್ಶನ ಆಯೋಜಿಸಲಾಗುತ್ತದೆ.

ಬೃಹದಾಕಾರ ವಸ್ತು ಪ್ರದರ್ಶನ:

      1964ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಈಗ ಬೃಹದಾಕಾರವಾಗಿದೆ. ಪ್ರದರ್ಶನದಲ್ಲಿ 160ರಿಂದ 200 ಮಳಿಗೆಗಳು ಇರುತ್ತವೆ. ಇದಕ್ಕಾಗಿಯೇ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ರೈತರಿಗೆ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಪೂರಕವಾದಂತಹ ಮಾಹಿತಿ, ಪ್ರಾತ್ಯಕ್ಷಿಕೆ, ರೈತ ಸಾಧಕರ ಚಿತ್ರಣ, ಸಿದ್ಧ ಮಾದರಿಗಳು, ಹೊಸ ಉತ್ಪನ್ನಗಳು, ಮಾರುಕಟ್ಟೆ, ಮನರಂಜನೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವೂ ಲಭ್ಯವಿದೆ.

ಸರಕಾರಿ ಇಲಾಖೆಗಳು ಭಾಗಿ:

      ಪ್ರದರ್ಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳು ಭಾಗವಹಿಸುತ್ತವೆ. ಕೃಷಿ, ಕೈಗಾರಿಕೆ, ತೋಟಗಾರಿಕೆ, ಅರಣ್ಯ, ರೇ‍‍‍‍ಷ್ಮೆ ಪಶುಸಂಗೋಪನೆ, ಮೀನುಗಾರಿಕೆ, ಆರೋಗ್ಯ, ನೀರಾವರಿ, ಜಲ ಸಂಪನ್ಮೂಲ, ಶಿಕ್ಷಣ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಯಲ್ಲಿನ ವಿವಿಧ ಯೋಜನೆ, ಅನುದಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ ಪ್ರಾತ್ಯಕ್ಷಿಕೆ, ಸಾಧನೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆ, ವಿದ್ಯಾರ್ಥಿಗಳಿಂದ ಆವಿ‍ಷ್ಕಾರಗೊಂಡ ಹೊಸ ಮಾದರಿ ಸೇರಿದಂತೆ ಇತ್ಯಾದಿ ಹತ್ತು ಹಲವು ಮಾಹಿತಿ ಪ್ರದರ್ಶನದಲ್ಲಿ ನೋಡಬಹುದು.

 ಮನರಂಜನೆಯೂ ಉಂಟು:

      ನಾಡಿನ ವಿವಿಧ ಪ್ರದೇಶಗಳಿಂದ ಜಾತ್ರೆಗೆ ಬರುವ ಭಕ್ತರು, ರೈತರು, ಶಾಲಾಕಾಲೇಜು ವಿದ್ಯಾರ್ಥಿಗಳು, ವಯಸ್ಕರ ಮನಸ್ಸುಗಳಿಗೆ ನಿತ್ಯ ಸಂಜೆ ಸಾಂಸ್ಕೃತಿಕ ರಸದೌತಣ ಏರ್ಪಡಿಸಲಾಗುತ್ತದೆ. ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯಿಂದ ಲಿಂ.ಶ್ರೀಗಳ ಕುರಿತು ಭಕ್ತಿ ಪ್ರಧಾನ ಐತಿಹಾಸಿಕ ನಾಟಕ, ಸಾಮಾಜಿಕ ಮತ್ತು ಪೌರಾಣಿಕ ನಾಟಕ, ಜನಪದ ಗಾಯನ, ನೃತ್ಯ, ಭರತನಾಟ್ಯ ಎಲ್ಲವೂ ಒಂದೇ ಸೂರಿನಡಿ ಸಿಗುತ್ತವೆ. ಜತೆಗೆ, ಜಾತ್ರೆಯಲ್ಲಿ ತಿಂಡಿ ತಿನಿಸುಗಳ ಸಾಲು ಸಾಲು ಅಂಗಡಿ, ಮಕ್ಕಳಿಗೆ ವಿಭಿನ್ನ ಆಟಗಳು, ಆಟಿಕೆ ಸಾಮಗ್ರಿಗಳೂ ಕೈಗೆಟುಕುತ್ತವೆ.

      ಪ್ರದರ್ಶನದ ವೇಳೆ ಫೆಬ್ರವರಿ 12ರಿಂದ 26ರವರೆಗೆ ಶ್ರೀ ಸಿದ್ಧಗಂಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಫೆಬ್ರವರಿ 21ರಂದು ಮಹಾಶಿವರಾತ್ರಿ ಪ್ರಯುಕ್ತ ಸಂಜೆ 5 ಗಂಟೆಯಿಂದ ಮರುದಿನ ಮುಂಜಾನೆ 5 ಗಂಟೆಯವರೆಗೆ, ಫೆಬ್ರವರಿ 22ರ ರಥೋತ್ಸವದಂದು ಸಂಜೆ 4ರಿಂದ ರಾತ್ರಿ 11ರವರೆಗೆ, 23ರಂದು ಬೆಳ್ಳಿಪಾಲಕಿ ಉತ್ಸವದ ಪ್ರಯುಕ್ತ ಸಂಜೆ 5 ಗಂಟೆಯಿಂದ ಮರುದಿನ ಮುಂಜಾನೆ 4 ಗಂಟೆಯವರೆಗೆ, 24 ಮತ್ತು 25ರಂದು ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ, 26ರಂದು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.

(Visited 22 times, 1 visits today)