ತುಮಕೂರು:

      ಹಸಿ ಕಸ-ಒಣ ಕಸವನ್ನು ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಚರ್ಚಾ/ಪ್ರಬಂಧ ಸ್ಪರ್ಧೆ, ಮಕ್ಕಳಿಂದ ಜಾಗೃತಿ ಜಾಥಾ, ವಿದ್ಯಾರ್ಥಿಗಳಿಗಾಗಿ ಸಾಂಸ್ಕøತಿಕ ಕಾರ್ಯಕ್ರಮ, ಪ್ರತೀ ವಾರ್ಡಿನಲ್ಲಿ ಬೀದಿ ನಾಟಕ, ಸ್ಥಳೀಯ ಮಖಂಡರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಗುಂಪು ಚರ್ಚೆ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ತಿಳಿಸಿದರು.

       ಸ್ಮಾರ್ಟ್ ಸಿಟಿ ಕಚೇರಿಯಲ್ಲಿಂದು ಪತ್ರಿಕಾ ಹೇಳಿಕೆ ನೀಡಿದ ಅವರು ಸ್ವಚ್ಛ, ಸುಂದರ ಹಸಿರು ತುಮಕೂರನ್ನಾಗಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್, ಮಹಾನಗರ ಪಾಲಿಕೆ ಹಾಗೂ ಭಗೀರಥ ಸಂಸ್ಥೆಯ ಸಹಕಾರದಲ್ಲಿ ಈ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ನಗರದ ಎಲ್ಲ ಮನೆ-ಮನೆಗೆ ಭೇಟಿ ನೀಡಿ ಕರಪತ್ರ, ಫ್ಲೈಯರ್, ಬ್ಯಾನರ್, ಸ್ಟಿಕರ್, ಪೋಸ್ಟರ್‍ಗಳನ್ನು ವಿತರಣೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆ ಸದಸ್ಯರು, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರಿಗೆ ಅವರ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.

      ಪಾಲಿಕೆ ವತಿಯಿಂದ ಮನೆಯಲ್ಲಿಯೇ ಉತ್ಪತ್ತಿಯಾಗುವ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನದ ತರಬೇತಿಯನ್ನು ನೀಡಿ 500 ಮನೆಗಳಲ್ಲಿ ಪರಿವರ್ತನಾ ಘಟಕಗಳನ್ನು ನಿರ್ಮಿಸಿಕೊಡಲಾಗಿದೆ. ಈ ಘಟಕಕ್ಕಾಗಿ ಪೂರಕ ಸಾಮಗ್ರಿಗಳನ್ನು ಒದಗಿಸಿದ್ದು, ಈಗಾಗಲೇ ನಾಗರಿಕರು ಘಟಕದಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮನೆಗಳಲ್ಲಿ ಕಡ್ಡಾಯವಾಗಿ ಆಗಸ್ಟ್ ಮಾಹೆಯೊಳಗಾಗಿ ಈ ಗೊಬ್ಬರ ಪರಿವರ್ತನಾ ಘಟಕವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

      ನಗರದಲ್ಲಿರುವ ಬಾರ್, ಮಾಂಸದಂಗಡಿ, ಕಲ್ಯಾಣ ಮಂಟಪ, ಶಾಲಾ-ಕಾಲೇಜುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅವರ ಹಂತದಲ್ಲಿಯೇ ವಿಲೇವಾರಿ ಮಾಡಲು ತರಬೇತಿ ನೀಡಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ಮಾಂಸದಂಗಡಿಗಳು ಎಲ್ಲೆಂದರಲ್ಲಿ ಬಿಸಾಡುವ ತ್ಯಾಜ್ಯದಿಂದ ನಗರದ ನೈರ್ಮಲ್ಯ ಹಾಳಾಗುವುದಲ್ಲದೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲ ಮಾಂಸದಂಗಡಿಗಳಿಗೂ ಸಮರ್ಪಕವಾಗಿ ತಾಜ್ಯ ನಿರ್ವಹಣೆ ಮಾಡಲು ತಿಳುವಳಿಕೆ ನೀಡಲಾಗಿದೆ ಎಂದರು.

        ಸ್ವಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ತಿಂಗಳೂ ಸ್ವಚ್ಛ ಶಾಲೆ, ಸ್ವಚ್ಛ ಆಸ್ಪತ್ರೆ, ಸ್ವಚ್ಛ ಹೋಟೆಲ್, ಸ್ವಚ್ಛ ಹಾಸ್ಟೆಲ್ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಸಮರ್ಪಕವಾಗಿ ತ್ಯಾಜ್ಯವನ್ನು ನಿರ್ವಹಿಸುವ ಪಾಲಿಕೆಯ ವಾಹನ ಚಾಲಕರು, ಸಹಾಯಕರು, ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು ಸೇರಿದಂತೆ ಎಲ್ಲ ಸಿಬ್ಬಂದಿಗಳಿಗಾಗಿ ಸ್ಪರ್ಧೆ ಏರ್ಪಡಿಸಿ ಪ್ರತೀ ತಿಂಗಳು ಒಬ್ಬರನ್ನು ಗುರುತಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

        ಸ್ವಚ್ಛ ತುಮಕೂರು ಹಾಗೂ ಹಸಿರು ನಗರವನ್ನಾಗಿ ನಿರ್ಮಿಸಲು ಸಾರ್ವಜನಿಕರಿಗೆ ಉತ್ತೇಜನ ನೀಡುವ ಸಲುವಾಗಿ ಸೈಕ್ಲೋಥಾನ್, ವಾಕಥಾನ್, ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ನಗರದ ನಾಗರಿಕರೆಲ್ಲರೂ ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

(Visited 32 times, 1 visits today)