ತುಮಕೂರು:

     ಜೂ.25 ರಿಂದ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಮಾಡಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಸೋಮವಾರ ಕಾಂಗ್ರೆಸ್ ಮುಖಂಡರು ಹಾಗೂ ವಿದ್ಯಾರ್ಥಿಗಳ ಪೋಷಕರೊಂದಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದ ಅವರು, ರಾಜ್ಯದಲ್ಲಿ 2,879 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕೊರೋನ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಒಂದು ರೀತಿಯ ಭಯದ ವಾತಾವರಣವಿದೆ. ಹೀಗಾಗಿ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

      ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದಾಗ ಕೇಂದ್ರದ ಸ್ವಚ್ಚತೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡುವ ವ್ಯವಸ್ಥೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

      ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೆ ನಮ್ಮನ್ನು ಹಾಕಲಾಗಿದೆ. ನಮಗೆ ಬಸ್ ಸೌಲಭ್ಯದ ಸಮಸ್ಯೆ ಇದೆ, ಆದುದರಿಂದ ನಮ್ಮ ಊರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಕೆಲವು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

      ಈಗಾಗಲೇ ಮಧ್ಯಾಹ್ನದ ಬಿಸಿಯೂಟ ಯೋಜನೆ ನಿಂತು ಹೋಗಿದೆ. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಬಿಸಿಯೂಟ ನೌಕರರಿಗೆ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಆದುದರಿಂದ ಅವರಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಮುರಳೀಧರ ಹಾಲಪ್ಪ ಅವರು, ಬಿಸಿಯೂಟ ನೌಕರರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

     ಆರ್‍ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಶುಲ್ಕವನ್ನು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಬಿಉಗಡೆ ಮಾಡಿದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಿಕ್ಷಕರಿಗೆ ವೇತನ ನೀಡಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಪೋಷಕರಿಗೆ ಶುಲ್ಕ ಪಾವತಿಸಲು ಒತ್ತಡ ಹಾಕುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ಮನವಿ ಸ್ವೀಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮಾತನಾಡಿ, ಜಿಲ್ಲೆಯ 256 ಖಾಸಗಿ ಶಾಲೆಗಳಿಗೆ 2019 – 2020 ನೇ ಸಾಲಿನ ಆರ್‍ಟಿಇ ಹಣ ಮೊದಲ ಕಂತು 5.86 ಕೋಟಿ ರೂ. ಬಿಡುಗೆಯಾಗಿದ್ದು, ಇನ್ನು 10 ದಿನದೊಳಗೆ ಆರ್‍ಟಿಇ ಅಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

      ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ರಂಗದಾಸಪ್ಪ ಮಾತನಾಡಿ, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 23,783 ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13,534 ಸೇರಿ 37,317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 85 ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 59 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

      ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಒಂದೊಂದು ಪರೀಕ್ಷಾ ಕೇಂದ್ರದಲ್ಲಿ 18 ರಿಂದ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪರೀಕ್ಷೆ ಬರೆಯುವ ಕೊಠಡಿಗಳ ಸಂಖ್ಯೆಯೂ ಹೆಚ್ಚಲಿದೆ. ತುಮಕೂರು ಜಿಲ್ಲೆಯಲ್ಲಿ 7 ಪರೀಕ್ಷಾ ಕೇಂದ್ರಗಳಲ್ಲಿ ಬ್ಲಾಕ್ ಪರೀಕ್ಷಾ ಕೇಂದ್ರ ಮಾಡಲಾಗಿದೆ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಹ್ಯಾಂಡ್ ಬಿಲ್ ತಲುಪಿಸಿ ಆತ್ಮಸ್ಥೈರ್ಯ ತುಂಬಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ವಲಸೆ, ವಸತಿ ನಿಲಯ, ವಸತಿ ಶಾಲೆ ಮಕ್ಕಳಿಗೆ ತೊಂದರೆಯಾಗದಂತೆ ಆ ವಿದ್ಯಾರ್ಥಿಗಳು ಎಲ್ಲಿ ಬಯಸುತ್ತಾರೋ ಅಂತಹ ಕಡೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಇದುವರೆಗೂ 446 ವಿದ್ಯಾರ್ಥಿಗಳು ಜಿಲ್ಲೆಯಿಂದ ಹೊರಗೆ ಹೋಗಿದ್ದು, ಅದರಲ್ಲಿ 203 ವಿದ್ಯಾರ್ಥಿ ವಾಪಸ್ ಬಂದಿದ್ದಾರೆ, ಇನ್ನುಳಿದ ವಿದ್ಯಾರ್ಥಿಗಳು ಎಲ್ಲಿ ಬಯಸುತ್ತಾರೋ ಅಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

      ಸಿದ್ಧಗಂಗಾ ಮಠದಲ್ಲಿ 1,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಮಾಸ್ಕ್ ವಿತರಿಸಿ ಸ್ಯಾನಿಟೈಸರ್ ಹಾಕಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ರೇವಣಸಿದ್ಧಯ್ಯ, ಜಿ.ಎಸ್. ಸೋಮಣ್ಣ, ಟಿ.ಎಸ್. ತರುಣೇಶ್, ಮರಿಚನ್ನಮ್ಮ, ವಾಲೆಚಂದ್ರಯ್ಯ, ಗೋವಿಂದೇಗೌಡ, ಮಂಜುನಾಥ್ ಇದ್ದರು.

(Visited 4 times, 1 visits today)