ತುಮಕೂರು : 

      ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಜಿಲ್ಲೆಯ ಸುಪ್ರಸಿದ್ಧ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವವು ಶಾಸ್ತ್ರೋಕ್ತವಾಗಿ ಜರುಗಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪುಣ್ಯ ಪ್ರಸಿದ್ಧಿಯಾಗಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವುದರಿಂದ ಬರುವ ಭಕ್ತಾಧಿಗಳ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ನಿಯಾಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗಬೇಕು ಎಂದರು.

      ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು/ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು. ಜಾತ್ರಾ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯವರು ಅಗತ್ಯ ಔಷಧಿ, ಸಿಬ್ಬಂದಿ, ಆಂಬುಲೆನ್ಸ್, ವ್ಯವಸ್ಥೆ ಮಾಡಬೇಕು. ಜಾತ್ರೆಯಲ್ಲಿ ಭಕ್ತಾದಿಗಳಿಗೆ ನೀಡುವ ಆಹಾರ(ಪ್ರಸಾದ)ವನ್ನು ತಪಾಸಣೆ ಮಾಡಬೇಕು. ವೈದ್ಯರು, ಎಎನ್‍ಎಮ್, ಆಶಾಕಾರ್ಯಕರ್ತರು ಸೇರಿದಂತೆ ವೈದ್ಯಕೀಯ ತಂಡ ಶಿಪ್ಟ್‍ನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

      ಲೋಕೋಪಯೋಗಿ ಇಲಾಖೆ ದೇವರಾಯನದುರ್ಗದಲ್ಲಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆಗೆ ಅಡ್ಡಲಾಗಿರುವ ಗಿಡ-ಮರಗಳನ್ನು ಫೆಬ್ರವರಿ ಮಾಸಾಂತ್ಯದ ವೇಳೆಗೆ ಕಟಾವು ಮಾಡಬೇಕು. ಜಾತ್ರೆಯ ಸಮಯದಲ್ಲಿ ನಿರಂತರ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ದೇವಾಲಯದ ರಥ ಬೀದಿ, ವಾಹನ ನಿಲುಗಡೆ, ಇನ್ನಿತರೆ ಸ್ಥಳಗಳಲ್ಲಿ ಬೀದಿ ದೀಪವನ್ನು ಅಳವಡಿಸುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚನೆ ನೀಡಿದರು.

      ಅಗ್ನಿಶಾಮಕ ದಳ ಅಧಿಕಾರಿಗಳು ಖುದ್ದು ಹಾಜರಿದ್ದು ಯಾವುದೇ ಅಗ್ನಿ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಡಾಬಸ್‍ಪೇಟೆ, ತುಮಕೂರು ನಗರ ಇನ್ನಿತರೆ ಮಾರ್ಗದಿಂದ ವಿಶೇಷ ಸಾರಿಗೆ ವ್ಯವಸ್ಥೆ, ಸೂಕ್ತ ನಿಲ್ದಾಣದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಕುಂಬಿ ಬೆಟ್ಟಕ್ಕೆ ಕೆ.ಎಸ್.ಆರ್.ಟಿ.ಸಿ. ಮಿನಿ ಬಸ್ ವ್ಯವಸ್ಥೆ ಕಲ್ಪಸಬೇಕೆಂದು ಕೆ.ಎಸ್.ಆರ್.ಟಿ.ಸಿ. ಉಪವಿಭಾಗೀಯ ಸಾರಿಗೆ ಅಧಿಕಾರಿ ಅವರಿಗೆ ಸೂಚಿಸಿದರು.

ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತೆ ಅತಿ ಮುಖ್ಯ:-

      ಮಹಾನಗರ ಪಾಲಿಕೆಯವರು ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್, ಸ್ವಚ್ಛತೆ ಕಾಪಾಡುವುದರೊಂದಿಗೆ ಜಾತ್ರೆಯಲ್ಲಿ ಉಂಟಾಗುವ ತ್ಯಾಜ್ಯದ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ನೀರಿನ ಕೊರತೆಯುಂಟಾಗದಂತೆ ಟ್ಯಾಂಕರ್‍ಗಳ ಮೂಲಕ ಸರಬರಾಜು ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾರ್ಚ್ 27ರಂದು ಬ್ರಹ್ಮರಥೋತ್ಸವ:-

       ಜಾತ್ರೆ ಅಂಗವಾಗಿ ಮಾರ್ಚ್ 27ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಅಂದು ರಾತ್ರಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವತಿಯಿಂದ ಉತ್ತಮ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖಾ ಅಧಿಕಾರಿಗೆ ಸೂಚಿಸಿದರು ಅಬಕಾರಿ ಇಲಾಖೆಯವರು ಕ್ಷೇತ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಅರಣ್ಯ ಇಲಾಖೆಯವರು ಕುಂಭಿ ಬೆಟ್ಟದಲ್ಲಿ ಇಲಾಖೆಗೆ ಸೇರಿದ ಸ್ಥಳದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ ಸಾರಿಗೆ ಸಂಚಾರ ಹಾಗೂ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಇಲಾಖೆಯ ಗಾರ್ಡ್‍ಗಳನ್ನು ನಿಯೋಜಿಸಬೇಕು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಮಿತ್ರರನ್ನ ನೇಮಿಸುವುದು ಸೇರಿದಂತೆ ಎಲ್ಲಾ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪ್ರತಿ ಬಾರಿಯಂತೆ ಈ ಬಾರಿಯು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.

      ಜಿಲ್ಲಾ ಖಜಾನೆಯಿಂದ ದೇವಾಲಯದ ಆಭರಣಗಳನ್ನು ತೆಗೆದುಕೊಂಡು ಹೋಗುವಾಗ ಮತ್ತು ಬರುವಾಗ ಇಬ್ಬರು ದಪೇದಾರ್ ಹಾಗೂ 10 ಮಂದಿ ಗನ್‍ಮ್ಯಾನ್‍ಗಳ ಸೂಕ್ತ ರಕ್ಷಣೆ ಹಾಗೂ ಸ್ವಾಮಿಗೆ ಆಭರಣ ತೊಡಿಸುವ ಅವಧಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಹೇಳಿದರು.

     ಕೊರೋನಾ ಹಿನ್ನೆಲೆಯಲ್ಲಿ ಸೇವಾರ್ಥ ಕಾರ್ಯಗಳಿಗೆ ಬರುವ ಭಕ್ತರನ್ನು 5 ಜನರಿಗೆ ಸೀಮಿತಗೊಳಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಈ ಬಗ್ಗೆ ಪ್ರಚುರ ಪಡಿಸಬೇಕೆಂದರು.

      ತುಮಕೂರು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಅಜಯ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ತುಮಕೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಯಪಾಲ್, ಅರ್ಚಕರಾದ ರಾಜುಭಟ್ಟರು, ರಂಗಸ್ವಾಮಿ, ಭಾರತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

(Visited 35 times, 1 visits today)