ತುಮಕೂರು

ತಮಗೆ ಡಿಸಿಎಂ ಪದವಿ ನೀಡದಿರುವ ಪಕ್ಷದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಈ ವಿಚಾರದಲ್ಲಿ ಬೇಸರವಿಲ್ಲ ಎಂದಿದ್ದಾರೆ.
ಪದಗ್ರಹಣ ಸಮಾರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, “ಪಕ್ಷದ ಹಾಗೂ ಹೈಕಮಾಂಡ್ ನಿರ್ಧಾರ ಅಂತಿಮ. ಅದಕ್ಕೆ ನಾವು ಬೆಲೆ ಕೊಡುತ್ತೇವೆ’’ ಎಂದರು.
ಸದ್ಯ ಒಬ್ಬರಿಗೆ ಮಾತ್ರ ಡಿಸಿಎಂ ಸ್ಥಾನ ಎಂದು ಹೈಕಮಾಂಡ್ ಹೇಳಿದೆ. ಹೀಗಾಗಿ ಹೈಕಮಾಂಡ್ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಸಣ್ಣ ಪುಟ್ಟ ವ್ಯತ್ಯಾಸ ಬಿಟ್ಟು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಬಗೆಹರಿದಿವೆ’’ ಎಂದವರು ಹೇಳಿದರು.
ಸಚಿವ ಸಂಪುಟದಲ್ಲಿ ನನಗೂ ಅವಕಾಶ ಮಾಡಿಕೊಟ್ಟಿರುವ ಎಐಸಿಸಿ ನಾಯಕರಿಗೆ ಧನ್ಯವಾದಗಳು. ಹಾಗೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರಿಗೂ ಕೂಡ ಇದು ಅತಿ ದೊಡ್ಡ ಸವಾಲು. ರಾಜ್ಯದ ಜನ ಬಹಳಷ್ಡು ನಿರೀಕ್ಷೆ ಮಾಡಿದ್ದಾರೆ. ಇವನ್ನೆಲ್ಲ ನಾವು ಈಡೇರಿಸಬೇಕಿದೆ’’ ಎಂದು ಅವರು ಹೇಳಿದರು.
ಇನ್ನು ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಜನರಿಗೆ ತಿಳಿಸಿದ್ದೇವೆ. ಐದೂ ಗ್ಯಾರಂಟಿ ಜಾರಿ ಮಾಡುವುದು ಬಹಳ ಪ್ರಮುಖವಾದದ್ದು. ಇಂದಿನ ಕ್ಯಾಬಿನೆಟ್‌ನಲ್ಲೇ ಅವಗಳನ್ನು ಜಾರಿಗೆ ತರವುದರ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’’ ಎಂದು ಪರಮೇಶ್ವರ್ ಹೇಳಿದರು.

(Visited 12 times, 1 visits today)