ತುರುವೇಕೆರೆ :

ಕೋವಿಡ್ ಮಾರ್ಗ ಸೂಚಿ ಮರೆತು ಸಾರ್ವಜನಿಕರು ಪಟ್ಟಣದಲ್ಲಿ ಭಾನುವಾರವಾದರೂ ಸಹ ಮುಂಜಾವಿನಿಂದಲೇ ಪಟ್ಟಣದ ಬೀದಿಗಳಲ್ಲಿ ಜನಜಂಗುಳಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಜನಜಂಗುಳಿ ಜಾತ್ರೆಯಂತಿತ್ತು. ನಗರದ ಬಾಣಸಂದ್ರ ರಸ್ತೆಯಲ್ಲಿ ಜನತೆ ವಸ್ತುಗಳನ್ನು ಖರೀದಿಸಲು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.
ಅಂಬೇಡ್ಕರ್ ವೃತ್ತ ಮತ್ತು ಬಿರ್ಲಾ ಕಾರ್ನರ್ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಜನ ಸಾಮಾನ್ಯರು ನಿಯಮಾನುಸಾರ ಅಂತರ ಕಾಪಾಡಿಕೊಳ್ಳದೆ, ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೇ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ಬಾಣಸಂದ್ರ, ದಬ್ಬೇಘಟ್ಟ ಹಾಗೂ ಮಾಯ ಸಂದ್ರ ರಸ್ತೆ ಬದಿಗಳಲ್ಲಿನ ದಿನಸಿ ಅಂಗಡಿ, ಮಾಂಸದಂಗಡಿ, ಗಿರಣಿ, ಮೆಡಿಕಲ್, ರಸಗೊಬ್ಬರ, ಕಬ್ಬಿಣ ಮತ್ತು ಸಿಮೆಂಟ್ ಅಂಗಡಿ, ಅಕ್ಕಿ ಅಂಗಡಿ, ವಿದ್ಯುತ್ ಉಪಕರಣ, ಬಿಡಿಭಾಗ, ಎಟಿಎಂ, ಗ್ಯಾಸ್, ಪೆಟ್ರೋಲ್ ಬಂಕ್‍ಗಳ ಮುಂದೆ ಜನಸಂದಣಿ ಹೆಚ್ಚು ಇದ್ದಿದ್ದರಿಂದ ಜನ ಜಾತ್ರೆಯಂತೆ ಜನಜಂಗುಳಿ ಕಂಡು ಬರುತ್ತಿತ್ತು.
ಒಮ್ಮೆ ವ್ಯಾಪಾರ-ವಹಿವಾಟು ಮತ್ತು ಖರೀದಿದಾರರರನ್ನು ಅವಲೋಕಿಸಿ ನೋಡಿದರೆ ನಿಜಕ್ಕೂ ಕಠಿಣ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬ ಗೊಂದಲ ಎದ್ದು ಕಾಣುತ್ತಿತ್ತು.
ತುರುವೇಕೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದರು ಸಹ ಜನಸಾಮಾನ್ಯರಿಗೆ ಇದರ ಅರಿವು ಕಂಡು ಬರುತ್ತಿರಲಿಲ್ಲ. ಖರೀದಿಯ ಬರಾಟೆಯೊಂದನ್ನು ಹೊರತು ಪಡಿಸಿದರೆ ಬೇರೆ ಇನ್ಯಾವುದೇ ನಿಯಮಗಳ ಪರಿಪಾಲನೆ ಅಥವಾ ಕೋವಿಡ್ ಸೋಂಕಿನ ಭಯ ಇಲ್ಲಿನ ಜನತೆಗೆ ಇರಲಿಲ್ಲ.
ಒಟ್ಟಾರೆ ನಿಯಮಗಳ ಪಾಲನೆ ನಾವು ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿ ಅಧಿಕಾರಿಗಳಿಗೆ ಸವಾಲೇಸದ ರೀತಿಯಲ್ಲಿ ಕಂಡು ಬರುತ್ತಿತ್ತು.





