ತುರುವೇಕೆರೆ:

      ತಾಲೂಕಿನ ಕುಣಿಕೇನಹಳ್ಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‍ಡ್ಯಾಂನ ತಡೆಗೋಡೆ ವ್ಯವಸ್ಥಿತ ಕ್ರಮದಲ್ಲಿ ನಿರ್ಮಿತವಾಗದೆ ದಲಿತರ ಜಮೀನಿಗೆ ತೊಂದರೆಯಾಗುತ್ತಿದ್ದು, ಜಮೀನನಲ್ಲಿನ ತೆಂಗಿನ ಮರಗಳು ಹಳ್ಳಕ್ಕೆ ಬೀಳುವ ಹಂತ ತಲಿಪಿದೆ ಎಂದು ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಆರೋಪಿಸಿದರು.

       ತಾಲೂಕಿನ ಕುಣಿಕೇನಹಳ್ಳಿ ಹಳ್ಳದಲ್ಲಿ ನಿರ್ಮಿತವಾಗಿರುವ ಚೆಕ್‍ಡ್ಯಾಂ ಸ್ಥಳ ಪರಿಶೀಲನೆಗೆ ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಅಳತೆ ಮಾಡುವುದನ್ನು ವಿರೋಧಿಸಿ ಪ್ರತಿಭಟನೆಗೆ ನಡೆಸಿದರು.

        ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಮಾತನಾಡಿ ಸ್ಥಳ ಪರಿಷೀಲನೆ ನೆಪದಲ್ಲಿ ಹಳ್ಳವನ್ನು ಅಳತೆ ಮಾಡಲು ಬಂದಿದ್ದಾರೆ, ಕಾಮಗಾರಿ ಮಾಡುವ ಮುನ್ನವೇ ಅಳತೆ ಮಾಡದೆ ತಮಗೆ ಬೇಕಾದ ಜಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇದೀಗ ಅಳತೆ ಮಾಡಲು ಮುಂದಾಗಿರುವುದು ಯಾವ ನ್ಯಾಯ?. ನಾವು ನ್ಯಾಯ ಕೇಳುತ್ತಿರುವುದು ಹಳ್ಳದ ಎರಡೂ ಕಡೆ ನಿರ್ಮಿಸಿರುವ ತಡೆಗೋಡೆ ಅಪೂರ್ಣವಾಗಿದೆ ಹಾಗೂ ಈ ಹಿಂದೆ ಸುಜಲ ಜಲಾಯನ ಇಲಾಖೆಯ ಯೋಜನೆಯಡಿ ನಿರ್ಮಿಸಿದ್ದ ಚೆಕ್‍ಡ್ಯಾಂ ಜಾಗದಲ್ಲಿ ಚೆಕ್‍ಡ್ಯಾಂ ನಿರ್ಮಿಸದೆ, ಗುತ್ತಿಗೆದಾರರ ತಾಳಕ್ಕೆ ಕುಣಿದಿರುವ ಅಧಿಕಾರಿಗಳು ಬೇಕಾ ಬಿಟ್ಟಿಯಾಗಿ ಚೆಕ್‍ಡ್ಯಾಂ ನಿರ್ಮಿಸಿ ದಲಿತರ ಜಮೀನು ನೀರುಪಾಲಾಗುವಂತೆ ಮಾಡಿದ್ದಾರೆ. ಈ ವಿಚಾರವಾಗಿ ನಾನು ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ. ಆದರೆ ಅಧಿಕಾರಿಗಳು ಇಂದು, ನಾಳೆ ಎನ್ನುವ ಸಬೂಬಿನಲ್ಲೇ ಎರಡು ವರ್ಷ ದಿನಗಳನ್ನು ದೂಡಿದ್ದಾರೆ. ದಲಿತ ಜನಾಂಗಕ್ಕಿರುವ ಅಲ್ಪ ಸ್ವಲ್ಪ ಜಮೀನು ಹಳ್ಳದಲ್ಲಿನ ನೀರು ಪಾಲಾದರೆ ಕುಟುಂಬ ವಿಷ ಕುಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

      ಹಿರಿಯ ದಲಿತ ಮುಖಂಡ ಡೊಂಕಿಹಳ್ಳಿ ರಾಮಾಣ್ಣ ಮಾತನಾಡಿ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಮಗಾರಿಯನ್ನು ತಮಗೆ ಬೇಕಾದ ಜಾಗದಲ್ಲಿ ಗುತ್ತಿಗೆದಾರ ನಿರ್ಮಾಣ ಮಾಡಲಾಗಿದ್ದು ಒಂದೆಡೆಯಾದರೆ ಈ ಚೆಕ್‍ಡ್ಯಾಂನಿಂದ ದಲಿತರ ಜಮೀನು ನೀರುಪಾಲಾಗುವ ಹಂತಕ್ಕೆ ಬಂದು ನಿಂತಿದ್ದು, ಅಧಿಕಾರಿಗಳು ಮಾತ್ರ ಜಾಣಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

       ಕೆಲಕಾಲ ಪ್ರತಿಭಟನೆ: ಕಾಲುವೆ ಅಳತೆ ಮಾಡಲು ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಅಂಬೇಡ್ಕರ್ ಜಿಂದಾಬಾದ್ ಜೈ ಘೋಷದೊಂದಿಗೆ ಪ್ರತಿಭಟನೆಗೆ ಮುಂದಾದರು, ನಂತರ ಅಧಿಕಾರಿಗಳು ಅಳತೆ ಕಾರ್ಯ ಕೈಬಿಟ್ಟರು ಇದರಿಂದ ಕೆರಳಿದ ಕೆಲ ಸ್ಥಳೀಯ ಗ್ರಾಮಸ್ಥರು ಅಳತೆ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರಲ್ಲದೆ ದಲಿತ ಸಂಘರ್ಷ ಸಮಿತಿ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು.

      ಈ ಸಂದರ್ಭದಲ್ಲಿ ಸಣ್ಣ ನೀರವರಿ ಇಲಾಖೆಯ ಎ.ಇ.ಇ.ದೊಡ್ಡಯ್ಯ, ಕಂದಾಯ ತನಿಖಾಧಿಕಾರಿ ಶಿವಕುಮಾರ್, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಕಿರಣ್, ದಯಾನಂದ್, ಮೂರ್ತಿ ಇತರರು ಇದ್ದರು.

(Visited 9 times, 1 visits today)