ಕೊರಟಗೆರೆ:

      ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ ಆಧ್ಯತೆ ನೀಡಿ ಚಾಲ್ತಿಯಲ್ಲಿರುವ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಒತ್ತಾಯ ಮಾಡಿದರು.

      ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಗ್ರಾಪಂ ವ್ಯಾಪ್ತಿಯ ಬ್ರಹ್ಮಸಂದ್ರ ಮತ್ತು ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯಡಿ ಸುಮಾರು 9ಕೋಟಿ 35ಲಕ್ಷ ವೆಚ್ಚದ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಿ ಮಾತನಾಡಿದರು.

      ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸುವ ನೀರಾವರಿ ತಜ್ಞ ಪರಮಶಿವಯ್ಯ ಪಾತ್ರ ಮಹತ್ವವಾಗಿದೆ. ಮಲೆನಾಡಿನ 400ಟಿಎಂಸಿ ನೇತ್ರಾವತಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ನೀರಿಲ್ಲದೇ ಬರಡು ಭೂಮಿಯಾಗಿರುವ ಬಯಲು ಸೀಮೆ ಪ್ರದೇಶಗಳಿಗೆ ನೀರಿನ ಪೂರೈಕೆ ಮಾಡುವ ಯೋಜನೆ ಮಂಗಳೂರು ಜನರ ವಿರೋದದಿಂದ ಕೈಬೀಡಲಾಯಿತು ಎಂದು ಹೇಳಿದರು.

      ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರೂಪಿಸಲಾದ 13ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಬಯಲುಸೀಮೆ ಪ್ರದೇಶದ ರೈತರಿಗೆ ಅನುಕೂಲ ಆಗಲಿದೆ. ಸಮ್ಮಿಶ್ರ ಸರಕಾರದ ವೇಳೆ ಇನ್ನಷ್ಟು ಅಭಿವೃದ್ದಿ ಕಾಮಗಾರಿ ಒಳವಡಿಸಿ 20ಸಾವಿರ ಕೋಟಿಗೆ ಅಂದಾಜು ಮಾಡಲಾಗಿದೆ. ಪ್ರಸ್ತುತ ಸರಕಾರ ಅಭಿವೃದ್ದಿಗೆ ಆಧ್ಯತೆ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹ ಮಾಡಿದರು.

      ತುಮಕೂರು ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅರ್ಧ ಟಿಸಿಎಂ ನೀರಿನ ಅಗತ್ಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣ ಗೊಳಿಸುವ ಹೊಣೆ ನಮ್ಮೇಲ್ಲರ ಮೇಲಿದೆ. ಅಭಿವೃದ್ದಿ ಕಾಮಗಾರಿಗೆ ಪಕ್ಷಬೇದ ಮರೆತು ನಾವೇಲ್ಲರೂ ನೀರಾವರಿ ಯೋಜನೆಗೆ ಶ್ರಮಿಸೋಣ. ಬಯಲುಸೀಮೆ ರೈತರ ರಕ್ಷಣೆಗೆ ನೀರಾವರಿ ಯೋಜನೆಯಿಂದ ಮಾತ್ರ ಅನುಕೂಲ ಆಗಲಿದೆ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ವಿಜಯಕುಮಾರ್, ಜ್ಯೋತಿ, ಗ್ರಾಪಂ ಅಧ್ಯಕ್ಷ ನಜೀರ್, ಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಖರ್, ಅಶ್ವತ್ಥನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಎಇಇ ಚನ್ನವೀರಸ್ವಾಮಿ, ಲಲಿತೇಶ್ ಇದ್ದರು.

(Visited 10 times, 1 visits today)