ತುರುವೇಕೆರೆ:

      ತಾಲ್ಲೂಕಿನ ದಂಡಿನಶಿವರ ಹೋಬಳಿಯ ತೋವಿನಕೆರೆ ಆಸುಪಾಸಿನ ಗ್ರಾಮಸ್ಥರನ್ನು ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬೋನಿನ ಮೂಲಕ ಭಾನುವಾರ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.

       ದೊಂಬರನಹಳ್ಳಿ, ಚಿಮ್ಮನಹಳ್ಳಿ, ತೋವಿನಕೆರೆ, ಹಾಲ್ದೇವರಹಟ್ಟಿ, ಮಾರತ್ತಮ್ಮನಹಳ್ಳಿ, ಡಿ.ಶೆಟ್ಟಿಹಳ್ಳಿ, ಹೊಸಹಳ್ಳಿ, ಕುರುಬರಹಳ್ಳಿ, ಅಕ್ಕಳಸಂದ್ರ ಬಸವಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಸಾಕು ಪ್ರಾಣಿಗಳನ್ನು ಚಿರತೆಯು ಹಿಡಿದು ತಿನ್ನುವ ಮೂಲಕ ಕಳೆದ ಐದಾರು ತಿಂಗಳಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.

       ಗೊಲ್ಲರಹಟ್ಟಿಗಳ ಕೊಟ್ಟಿಗೆಗಳಲ್ಲಿ ಕೂಡಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿದ್ದವು. ಇನ್ನು ರೈತರು ಮುಂಜಾನೆ ಮತ್ತು ಸಂಜೆ ತಮ್ಮ ತೋಟಕ್ಕೆ ನೀರು ಬಿಡಲು ಹೋಗುವುದಕ್ಕೂ ಹೆದರುತ್ತಿದ್ದರು.

      ಇದರಿಂದ ಆತಂಕಗೊಂಡ ಜನರು ಅರಣ್ಯಾಧಿಕಾರಿಗೆ ದೂರು ನೀಡಿದ್ದರು. ಅರಣ್ಯಾಧಿಕಾರಿಗಳು ಮೂರು ದಿನಗಳ ಹಿಂದೆ ತೋವಿನಕೆರೆ ಬಳಿಯ ಬಸವಾಪುರ ಕಾವಲ್‌ನ ತೋಟವೊಂದರಲ್ಲಿ ಬೋನ್‌ ಇಟ್ಟು ಅದರಲ್ಲಿ ನಾಯಿ ಕಟ್ಟಿ ಹಾಕಿದ್ದರು. ಆಹಾರ ಅರಸಿ ಬಂದ ಗಂಡು ಚಿರತೆ ಭಾನುವಾರ ರಾತ್ರಿ ಬೋನಿಗೆ ಬಿದ್ದಿದೆ.

       ಇದಕ್ಕೂ ಮೊದಲು ಅಕ್ಕಳಸಂದ್ರ ಮತ್ತು ತೋವಿನಕೆರೆ ತೋಟ ಸಾಲಿನಲ್ಲಿ ಒಂದು ತಿಂಗಳ ಹಿಂದೆಯೇ ಎರಡು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

(Visited 30 times, 1 visits today)