ಅಂಧ ಕಲಾವಿದರಿಗೆ ಕಾರ್ಮಿಕ ಇಲಾಖೆಯಿಂದ ಅಗತ್ಯ ವಸ್ತುಗಳ ವಿತರಣೆ!

ತುಮಕೂರು:

      ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಭೈರವೇಶ್ವರ ಕಾಲೇಜಿನ ಬಳಿ ವಾಸವಿರುವ ಅಂಧ ಕಲಾವಿದರಿಗೆ ಇಂದು ಬೆಳಿಗ್ಗೆ ಕಾರ್ಮಿಕ ಇಲಾಖೆಯಿಂದ 25 ಕೆ.ಜಿ. ಅಕ್ಕಿ, ಸಕ್ಕರೆ, ಸೋಪು ಹಾಗೂ ಮತ್ತಿತರ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟೆ, ಕಂದಾಯ ನಿರೀಕ್ಷಕರು ಮತ್ತಿತರರಿದ್ದರು.

      ಕೋವಿಡ್-19 ಸೋಂಕು ಹರಡದಂತೆ ಜಾರಿಯಲ್ಲಿರುವ ಲಾಕ್‍ಡೌನ್ ಸಂದರ್ಭದಲ್ಲಿ ಆಹಾರಕ್ಕೆ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ ಈ ಅಂಧ ಕಲಾವಿದರ ತಂಡಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಕೊರೋನಾ ಯೋಧರಿಂದ ಆಹಾರ ಪೂರೈಕೆ:

       ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಹಾಗೂ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ರಚಿಸಲಾಗಿರುವ ಕೊರೋನಾ ಯೋಧರು (ಕೊರೋನಾ ವಾರಿಯರ್ಸ್) ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹೆಗ್ಗೆರೆಯ ಈ 5 ಮಂದಿ ಅಂಧ ಕಲಾವಿದರಾದ ವಿಜಯ್‍ಕುಮಾರ್, ಸುರೇಶ್, ಮಂಜುಳ, ಶಿವಮ್ಮ, ಶೈಲಜ ಅವರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

      ನಂದನ್‍ಕುಮಾರ್, ಹೇಮಂತ್‍ಕುಮಾರ್, ಕುಮಾರಸ್ವಾಮಿ, ಗಿರೀಶ್ ಸೇರಿದಂತೆ 8 ಕೊರೋನಾ ಯೋಧರ ತಂಡವು ಬಾಳನಕಟ್ಟೆಯಲ್ಲಿರುವ ವೀರಶೈವ ಸಮಾಜದ ಕಲ್ಯಾಣ ಮಂಟಪದಲ್ಲಿ ತಯಾರಿಸಲಾಗುತ್ತಿರುವ ಆಹಾರವನ್ನು ಪ್ರತೀ ದಿನ ಅಂಧರಿಗೆ ತಲುಪಿಸುವ ಕೆಲಸ ಮಾಡುವುದರೊಂದಿಗೆ ಭೀಮಸಂದ್ರದಿಂದ ಮಲ್ಲಸಂದ್ರದವರೆಗೆ ಜೋಪಡಿಗಳಲ್ಲಿ ವಾಸಿಸುತ್ತಿರುವ 150 ಮಂದಿ ನಿರ್ಗತಿಕರು ಹಾಗೂ ಕಡುಬಡವರಿಗೂ ಆಹಾರ ಪೂರೈಕೆ ಮಾಡುತ್ತಿದ್ದಾರೆ.

      ಹೆಗ್ಗೆರೆಯ ಅಂಧ ಕಲಾವಿದರ ತಂಡವು ಲಾಕ್‍ಡೌನ್‍ನಿಂದ ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ತಿಳಿದ ಕೂಡಲೇ ಕಾರ್ಮಿಕ ಇಲಾಖೆ, ವಾರ್ತಾ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು ಕೂಡಲೇ ಧಾವಿಸಿ ದಿನಸಿ ಪದಾರ್ಥ, ಮಾಸ್ಕ್‍ಗಳನ್ನು ವಿತರಿಸುವುದರೊಂದಿಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

      ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಸದಸ್ಯ ಭೋಜಣ್ಣ, ವಾರ್ತಾ ಇಲಾಖೆ ಆರ್. ರೂಪಕಲಾ, ಆನಂದ್, ಆಹಾರ ನಿರೀಕ್ಷಕ ಕಾಂತರಾಜಯ್ಯ, ಸ್ಥಳೀಯರು ಉಪಸ್ಥಿತರಿದ್ದರು.

(Visited 4 times, 1 visits today)

Related posts