ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನಿಗಧಿಪಡಿಸಬೇಕು

ತುಮಕೂರು :

      ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠಕೂಲಿ ನಿಗಧಿ ಪಡಿಸಬೇಕು,ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡಿದ್ದ ನೂರಾರು ಬಿಸಿಯೂಟ ತಯಾರಕರು,ನಮಗೆ ಸೇವಾ ಭದ್ರತೆ ಒದಗಿಸಬೇಕು, ಬಿಸಿಯೂಟ ತಯಾರಕರ ಕಲ್ಯಾಣಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

      ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್,ಕಳೆದ 18 ವರ್ಷಗಳಿಂದ ಸರಕಾರ ಅಕ್ಷರ ದಾಸೋಹ ಯೋಜನೆಯಲ್ಲಿ ದುಡಿಯುತ್ತಿರುವ ನೌಕರರನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ಅವರಿಗೆ ಕನಿಷ್ಠ ವೇತನ ಜಾರಿ ಮಾಡದೆ, ಸೇವಾ ಭದ್ರತೆಯನ್ನು ನೀಡಿದೆ, ಅತ್ಯಂತ ಕಡಿಮೆ ಕೂಲಿಗೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿದೆ.ಕೋವಿಡ್-19 ಲಾಕ್‍ಡೌನ್‍ನಿಂದ ಶಾಲೆಗಳು ಮುಚ್ಚಿದ ಪರಿಣಾಮ ಕಳೆದ 8 ತಿಂಗಳಿನಿಂದ ವೇತನವಿಲ್ಲದ ಪರಿತಪಿಸುವಂತಾಗಿದೆ.ಎಐಟಿಯುಸಿಯ ನಿರಂತರ ಹೋರಾಟದ ಫಲವಾಗಿ ಸರಕಾರ 2020ರ ಜೂನ್, ಜುಲೈ ಮತ್ತು ಆಗಸ್ಟ್ 3 ತಿಂಗಳ ವೇತನವನ್ನು ಬಿಡುಗಡೆ ಮಾಡಿದೆ.ಇದಕ್ಕಾಗಿ ಸರಕಾರಕ್ಕೆ ಧನ್ಯವಾದ ತಿಳಿಸುತ್ತೇವೆ. ಆದರೆ ಕೋವಿಡ್ ಹಾವಳಿ ಇಂದಿಗೂ ಮುಂದುವರೆದಿದ್ದು,ಶಾಲೆ ತೆರೆದಿದ್ದರೂ ಬಿಸಿಯೂಟ ತಯಾರಿಸಲು ಅವಕಾಶವಿಲ್ಲ. ಆದರೂ ಶಾಲೆಯ ಸ್ವಚ್ಚಗೊಳಿಸುವುದು, ಶಿಕ್ಷಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಬಿಸಿಯೂಟ ನೌಕರರು ದಿನವೂ ಶಾಲೆಗಳಿಗೆ ಹೋಗುತ್ತಿದ್ದಾರೆ.ಸರಕಾರ ನೌಕರರಿಗೆ ಅಯಾಯ ತಿಂಗಳ ವೇತನವನ್ನು ಆ ತಿಂಗಳ 10ನೇ ತಾರೀಕಿನೊಳಗೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

      ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಕಾನೂನು ಸಲಹೆಗಾರರು, ವಕೀಲರೂ ಆದ ಶಿವಣ್ಣ,ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಸ್ಕೀಂ ನೌಕರರಾಗಿರುವ ಬಿಸಿಯೂಟ ತಯಾರಕರಿಗೆ ಪಿ.ಎಫ್., ಇಎಸ್‍ಐ ನೀಡಬೇಕು,ಇವರನ್ನು ಶಾಲಾ ಸಿಬ್ಬಂದಿ ಎಂದು ಪರಿಗಣಿಸಬೇಕು, ಅಡುಗೆ ಸಿಬ್ಬಂದಿಯನ್ನು ಮೂಲ ಕೈಪಿಡಿಯಲ್ಲಿ ಇರುವಂತೆ ಪರಿಷ್ಕರಿಸಬೇಕು,ಬೇಸಿಗೆ ಮತ್ತು ದಸರಾ ರಜಾ ದಿನಗಳನ್ನು ವೇತರ ರಹಿತಗೊಳಿಸದೆ, ವೇತನ ಸಹಿತ ರಜೆಯ್ನಾಗಿ ಘೋಷಿಸಿ, ನಿವೃತ್ತಿ ನಂತರ ಅವರಿಗೆ ಮಾಸಿನ 3000 ರೂ, 2 ಲಕ್ಷ ರೂ ಇಡುಗಂಟು ನೀಡಬೇಕು ಎಂಬ ಬೇಡಿಕೆಗಳು ನ್ಯಾಯಯುತವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದರು.

      ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಫೆಡರೇಷನ್ ನ ಜಿಲ್ಲಾ ಸಂಚಾಲಕ ಸತ್ಯನಾರಾಯಣ, ಗುಬ್ಬಿ ತಾಲೂಕು ಅಧ್ಯಕ್ಷೆ ವನಜಾಕ್ಷಮ್ಮ, ತುಮಕೂರು ನಗರ ಅಧ್ಯಕ್ಷೆ ರಾಧಮ್ಮ, ಜಿಲ್ಲಾ ಸಂಚಾಲಕಿ ಉಮಾದೇವಿ, ವಿವಿಧ ತಾಲೂಕು ಅಧ್ಯಕ್ಷರಾದ ಪುಷ್ಪಲತ, ನಾಗರತ್ನ, ಚಂದ್ರಕಲಾ, ನಳಿನ, ಗಂಗಮ್ಮ, ನಾಗರತ್ನ, ರಂಗತಾಯಮ್ಮ, ರಾಜಮ್ಮ ಮತ್ತು ಕಾಂತರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

(Visited 12 times, 1 visits today)

Related posts

Leave a Comment