ಅಮಲಾಪುರದಲ್ಲಿ MSME ಟೆಕ್ನಾಲಜಿ ಸೆಂಟರ್ ಸ್ಥಾಪನೆಗೆ 100 ಕೋಟಿ.ರೂ ಮಂಜೂರು

ತುಮಕೂರು :

      ತುಮಕೂರು ತಾಲೂಕು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ತಿಳಿಸಿದರು.

      ಕೌಶಲ್ಯ ತರಬೇತಿಗಳ ರೂಪುರೇಷೆ ಸಿದ್ಧಪಡಿಸುವ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು 100 ಕೋಟಿ ರೂ.ಗಳು ಮಂಜೂರಾಗಿದ್ದು, ರಾಜ್ಯ ಸರ್ಕಾರವು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಈಗಾಗಲೇ 15 ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಈ ಸೆಂಟರ್‍ನಲ್ಲಿ ಪ್ರತಿ ವರ್ಷ ಸುಮಾರು 5000 ಅಭ್ಯರ್ಥಿಗಳಿಗೆ ಕೈಗಾರಿಕಾಧಾರಿತ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

      ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗ ನೀಡಲು ಕೃಷಿ, ರೇಷ್ಮೆ, ತೋಟಗಾರಿಕೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಉತ್ಪಾದಿಸುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸುವ ಬಗ್ಗೆ 15 ದಿನಗಳೊಳಗಾಗಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

      ಸ್ಮಾರ್ಟ್ ಸಿಟಿ ವತಿಯಿಂದ 20 ಕೋಟಿ ರೂ.ವೆಚ್ಚದಲ್ಲಿ ತುಮಕೂರು ತಾಲೂಕಿನ ಅಮಲಾಪುರ, ಯಲ್ಲಾಪುರ, ಅರಕೆರೆ, ಅಜ್ಜಪ್ಪನಹಳ್ಳಿ, ವೀರನಕಲ್ಲು, ಸ್ವಾಂದೇನಹಳ್ಳಿ ಮತ್ತು ಮುತ್ಸಂದ್ರ ಗ್ರಾಮಗಳಲ್ಲಿ ಸಂಶೋಧನಾ ಕೇಂದ್ರ ಮತ್ತು ಸ್ಕಿಲ್ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಒತ್ತು ನೀಡುವ ದೃಷ್ಠಿಯಿಂದ ಆಹಾರ ಸಂಸ್ಕರಣ ಘಟಕಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

      ಡೆನ್ಮಾರ್ಕ್ ಮಾದರಿಯಲ್ಲಿ ವಸತಿ ಸೌಕರ್ಯಗಳನ್ನು ಒಳಗೊಂಡಂತೆ 342 ಉತ್ಪನ್ನಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಪ್ರತಿ ಕ್ಲಸ್ಟರ್‍ನಲ್ಲಿ 20 ಉದ್ದಿಮೆದಾರರಂತೆ ಸುಮಾರು 6840 ಉದ್ದಿಮೆಗಳನ್ನು ಸ್ಥಾಪಿಸುವ ಜೊತೆಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗುವುದು.

      ಅಲ್ಲದೇ ಎಂಎಸ್‍ಎಂಇ ಸಾರ್ಥಕ್ ಯೋಜನೆಯಡಿ ಉತ್ಪನ್ನಗಳಿಗೆ ಮೌಲ್ಯವರ್ಧಿತ ಬೆಲೆ ಕಲ್ಪಿಸಿ ಮತ್ತು ಬ್ರಾಂಡ್ ಇಮೇಜ್ ಕಲ್ಪಿಸಿ ಪಾರ್ವಡ್ ಮತ್ತು ಬ್ಯಾಕ್‍ವರ್ಡ್, ಸಾಮಾನ್ಯ ಪ್ಲಾಟ್‍ಪಾರ್ಮ್ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

      ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

(Visited 10 times, 1 visits today)

Related posts