ಆರೋಗ್ಯವಂತ ಸಮಾಜದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ!!

ತುಮಕೂರು :

     ಆರೋಗ್ಯವಂತ ಸಮಾಜದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟರು.

     ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದಾಗ ಮಾತ್ರ ದೇಶವೂ ಆರೋಗ್ಯಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವ ಕೆಲಸ ಇನ್ನು ಹೆಚ್ಚು ಹೆಚ್ಚು ಆಗಬೇಕು ಎಂದು ಅವರು ಹೇಳಿದರು.

      ಇಲ್ಲಿನ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಶಾಖೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸಂಶೋಧನಾ ಕೇಂದ್ರ, ಕಂಪೆನಿ, ಸಿಪ್ಲಾ ಕಂಪೆನಿ, ಲಯನ್ಸ್ ಕ್ಲಬ್, ಜ್ಞಾನ ಯೋಗ ಬೆಂಗಳೂರು ಹಾಗೂ ಅಶ್ವಿನಿ ಆಯುರ್ವೇದ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಪ್ರಸ್ತುತ ದಿನಗಳಲ್ಲಿ ಬಡವರಿಗೆ ಆರೋಗ್ಯ ಸೇವೆ ಸಿಗುವುದು ದುಸ್ತರವಾಗಿದೆ. ಆರೋಗ್ಯ ಸೇವೆ ಬಡವರ ಕೈಗೆಟಕದಷ್ಟರ ಮಟ್ಟಿಗೆ ಗಗನಕುಸುಮವಾಗುತ್ತಿದೆ. ಇಂಥ ಸಂದರ್ಭದಲ್ಲಿ ಪತ್ರಕರ್ತರು ಉಚಿತ ಆರೋಗ್ಯ ಶಿಬಿರ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದರು.

      ಸಮಾಜದ ಅಂಕು-ಡೊಂಕುಗಳನ್ನು ಜನರ ಮುಂದೆ ಇಡುವಂತಹ ಹಾಗೂ ಸಮಾಜದ ಅಂಕುಡೊಂಕು ತಿದ್ದುವುದು ಪತ್ರಕರ್ತರ ಕೆಲಸವಾಗಿದೆ. ಈ ಎಲ್ಲದರ ನಡುವೆ ಬಡವರಿಗೆ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಪತ್ರಕರ್ತ ಸಂಘ ಉಚಿತ ಆರೋಗ್ಯ ಮೇಳ ಆಯೋಜಿಸುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

      ಆರೋಗ್ಯ ಎನ್ನವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಇಂದು ಆರೋಗ್ಯ ಸೇವೆ ಎನ್ನುವುದು ದುಬಾರಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕಾಗಿದೆ. ದುಪ್ಪಟು ಖರ್ಚು ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅದೆಷ್ಟೋ ಬಡವರು ಆರೋಗ್ಯ ಸೇವೆಯಿಂದ ದೂರ ಉಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

      ಜನಸಾಮಾನ್ಯರು ಇಂದು ಮೂಢನಂಬಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಗರ್ಭಿಣಿ ಮಹಿಳೆಯ ಹೆರಿಗೆಯನ್ನು ಇಂತಿಷ್ಟೆ ಸಮಯಕ್ಕೆ ಮಾಡಿಸಬೇಕು ಎಂದು ಜ್ಯೋತಿಷಿ ಬಳಿ ಸಮಯ ನಿಗದಿ, ವಾಸ್ತು ಎಲ್ಲವನ್ನು ಕೇಳಿಕೊಂಡು ಬಂದು ಸಹಜ ಹೆರಿಗೆ ಬದಲು ಆಪರೇಷನ್ ಮೂಲಕ ಹೆರಿಗೆ ಮಾಡಿಸುವ ಪದ್ದತಿಗೆ ಮಾರು ಹೋಗಿದ್ದಾರೆ ಎಂದರು.

      ಜನಸಾಮಾನ್ಯರು ಇಂಥ ಮೂಢನಂಬಿಕೆಗಳಿಂದ ದೂರ ಉಳಿದು ನೈಜ ಪದ್ದತಿಯನ್ನು ಅನುಸರಣೆ ಮಾಡುವ ಮೂಲಕ ತಮ್ಮ ಬದುಕಿನ ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

      ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ಪತ್ರಿಕಾ ಭವನ ಪತ್ರಕರ್ತರ ಜತೆಗೆ ಸಾರ್ವಜನಿಕರಿಗೂ ಉಪಯೋಗವಾಗುವಂತಹ ರೀತಿಯಲ್ಲಿ ಬಳಕೆಯಾಗಬೇಕು ಎಂದರು.

      ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಹೆಚ್ಚು ಒತ್ತಡಗಳು ಇದ್ದೇ ಇರುತ್ತವೆ. ಕೆಲಸದ ಒತ್ತಡದಿಂದಲೇ ಜನ ಹೆಚ್ಚು ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

      ಪತ್ರಿಕಾ ಭವನ ಪತ್ರಕರ್ತರ ಜತೆಗೆ ಸಾರ್ವಜನಿಕರಿಗೂ ಉಪಯೋಗವಾಗುವಂತಹ ರೀತಿಯಲ್ಲಿ ಬಳಕೆಯಾಗಬೇಕು ಎಂದು ಅವರು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ಪತ್ರಿಕಾ ಭವನದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಸ್ಮಾರ್ಟ್ ಹಾಲ್ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

      ಪತ್ರಕರ್ತರಿಗೆ ನಿವೇಶನ ಕೊಡುವಂತೆಯೂ ಈ ಹಿಂದೆ ಮನವಿ ಮಾಡಲಾಗಿತ್ತು. ಈ ಬಗ್ಗೆಯೂ ಜಿಲ್ಲಾಧಿಕಾರಿಗಳು ಗಮನ ಹರಿಸಿ ಶೀಘ್ರವಾಗಿ ಪತ್ರಕರ್ತರಿಗೆ ನಿವೇಶನ ಒದಗಿಸಿಕೊಡುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕು ಎಂದರು.

     ಈ ಬೃಹತ್ ಉಚಿತ ಆರೋಗ್ಯ ಮೇಳವನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ಭವನವನ್ನು ಮತ್ತಷ್ಟು ಸುಸಜ್ಜಿತಗೊಳಿಸುವ ಜತೆಗೆ ಅತ್ಯಾಧುನಿಕ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್. ಶಿವಣ್ಣ, ಡಿಹೆಚ್‍ಓ ಡಾ. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ||ವೀರಭದ್ರಯ್ಯ ,ಚಿದಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಪತ್ರಕರ್ತರು ಮತ್ತು ಅವರ ಕುಟುಂಬದವರು ಆರೋಗ್ಯ ತಪಾಸಣೆಗೆ ಮಾಡಿಸಿಕೊಂಡರು.

 

(Visited 26 times, 1 visits today)

Related posts